ADVERTISEMENT

'ಯಡಿಯೂರಪ್ಪ ಬಂಧನ ಬೇಡ': ಹಿಂದಿನ ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:38 IST
Last Updated 26 ಜುಲೈ 2024, 15:38 IST
<div class="paragraphs"><p>ಬಿ.ಎಸ್.ಯಡಿಯೂರಪ್ಪ</p></div>

ಬಿ.ಎಸ್.ಯಡಿಯೂರಪ್ಪ

   

ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗೆ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ’ ಎಂಬ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.

ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು. ಇದೇ 29ರಿಂದ ಹೈಕೋರ್ಟ್‌ನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣಾ ನ್ಯಾಯಪೀಠದ ರೋಸ್ಟರ್‌ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಪ್ರಕರಣವನ್ನು ಮುಂದೂಡಿ ಆದೇಶಿಸಿದರು.

ADVERTISEMENT
ಪ್ರಕರಣವೇನು?

‘ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ, ನನಗೆ ನ್ಯಾಯ ಕೊಡಿಸಿ‘ ಎಂದು ಯಡಿಯೂರಪ್ಪ ಬಳಿ ಹೋಗಿದ್ದ 53 ವರ್ಷದ ಮಹಿಳೆಯೊಬ್ಬರು; ‘ಯಡಿಯೂರಪ್ಪ ಅವರು ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ 2024ರ ಮಾರ್ಚ್‌ 14ರಂದು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ  ದೂರು ನೀಡಿದ್ದರು.

ಇದರನ್ವಯ ಪೊಲೀಸರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012ರ ಕಲಂ 8 ಮತ್ತು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354(ಎ) ಅಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.