ಬೆಂಗಳೂರು: ‘ನ್ಯಾಯದಾನಕ್ಕೆ ಸಂವಿಧಾನ ತಳಹದಿಯಾಗಬೇಕೇ ಹೊರತು ಧರ್ಮವಲ್ಲ’ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆಅಭಿಪ್ರಾಯಪಟ್ಟರು.
ರಾಜ್ಯ ಹೈಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಪಿ.ಬಿ. ವರಾಳೆ ಅವರಿಗೆ ಸೋಮವಾರ ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಸ್ವಾಗತಿಸಲಾಯಿತು. ಈ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
‘ಯಾರ ಹುಟ್ಟೂ ಅವರ ಕೈಯಲ್ಲಿ ಇರುವುದಿಲ್ಲ. ಔರಂಗಾಬಾದ್ ನನ್ನ ಜೀವನದ ದಿಕ್ಕು ಬದಲಿಸಿದ ಊರು. ನಾನು ವೃತ್ತಿಯಲ್ಲಿ ನಡೆದು ಬಂದ ಹಾದಿಯನ್ನು ಅವಲೋಕಿಸಿಕೊಂಡಾಗ ಆಶ್ಚರ್ಯವಾಗುತ್ತದೆ. ಸಮಾನತೆಯ ಸಂವಿಧಾನ ಕರ್ತೃ ಅಂಬೇಡ್ಕರ್ ಅವರ ಕಾರಣದಿಂದ ನಾನಿಂದು ಈ ಸ್ಥಾನದಲ್ಲಿ ನಿಂತಿದ್ದೇನೆ’ ಎಂದು ಬಿ.ಆರ್. ಅಂಬೇಡ್ಕರ್ ಅವರ ಜೊತೆ ನಿಕಟವಾಗಿದ್ದ ತಮ್ಮ ಅಜ್ಜ ಮತ್ತು ತಂದೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
‘ಭಾಷೆ ಮತ್ತು ನೆಲದ ದೃಷ್ಟಿಯಿಂದ ನಾನು ಮಹಾರಾಷ್ಟ್ರದ ಮೂಲ ಹೊಂದಿದ್ದರೂ ಕನ್ನಡವನ್ನು ತಕ್ಕಮಟ್ಟಿಗೆ ಬಲ್ಲೆ. ಎರಡೂ ರಾಜ್ಯಗಳ ಬಾಂಧವ್ಯ ಅನನ್ಯವಾದುದು. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಬೆಂಗಳೂರು ವಕೀಲರ ಸಂಘ ಪುಷ್ಪವನವಿದ್ದಂತೆ. ಈ ಸಂಘದ ಪರಿಮಳದಲ್ಲಿ ನ್ಯಾಯತತ್ವಗಳ ಆಧಾರದಲ್ಲಿ ನಾನು ಕೆಲಸ ಮಾಡುತ್ತೇನೆ’ ಎಂದರು.
‘ಕಿರಿಯ ವಕೀಲರು ಇಂದು ತಂತ್ರಜ್ಞಾನ ಆಧಾರಿತ ವೃತ್ತಿಪರರಾಗಿದ್ದಾರೆ.ಹಿರಿಯ ವಕೀಲರಿಂದ ಮಾರ್ಗದರ್ಶನ ಪಡೆಯುವ ಮೂಲಕ ಅವರು ಹೆಚ್ಚಿನ ಸಾಧನೆ ಮಾಡಬೇಕು’ ಎಂದು ವರಾಳೆ ಆಶಿಸಿದರು.
ವರಾಳೆ ಅವರನ್ನು ಸನ್ಮಾನಿಸಿ ಮಾತನಾಡಿದ ಸಂಘದ ಅಧ್ಯಕ್ಷ, ಹಿರಿಯ ವಕೀಲ ವಿವೇಕ ಸುಬ್ಬಾರೆಡ್ಡಿ, ‘ಕರ್ನಾಟಕ–
ಮಹಾರಾಷ್ಟ್ರ ನಡುವೆ ಗಡಿ ಎಂಬುದಿಲ್ಲ. ಅಷ್ಟೊಂದು ಸೌಹಾರ್ದ ಸಂಬಂಧ ಎರಡೂ ರಾಜ್ಯಗಳ ಜೊತೆ ಇದೆ. ಈ ಹಿಂದಿನ ಅತ್ಯುತ್ತಮ ಮುಖ್ಯ ನ್ಯಾಯಮೂರ್ತಿಗಳಂತೆಯೇ ವರಾಳೆ ಅವರೂ ತಮ್ಮದೇ ಆದ ಛಾಪು ಮೂಡಿಸಲಿ ಎಂದು ಸಂಘ ಬಯಸುತ್ತದೆ’ ಎಂದರು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ನೀವೂ ನಮ್ಮೊಳಗೊಬ್ಬರಿದ್ದಂತೆ’ ಎಂದರು. ಈ ಕಾರ್ಯಕ್ರಮಕ್ಕೂ ಮೊದಲಿಗೆ ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ರಾಜ್ಯ ವಕೀಲರ ಪರಿಷತ್ ವತಿಯಿಂದ ಅಧ್ಯಕ್ಷ ಮೋತಕಪಲ್ಲಿ ಕಾಶಿನಾಥ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.