ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ಈಗಿನ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಸಿಬಿಐ ತನಿಖೆ ಹಿಂಪಡೆದ ಆದೇಶವನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಎರಡು ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
‘ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಅರ್ಜಿಯಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ-1946 ಮತ್ತು ಅಕ್ರಮ ಹಣ ವರ್ಗಾವಣೆ ಕಾಯ್ದೆ-2002ರ ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಅಧಿಕಾರದ ಕುರಿತಾದ ನಿಬಂಧನೆಗಳಿಗೆ ಸಂಬಂಧಿಸಿದ ವಿಚಾರಗಳು ಇಲ್ಲಿ ಉದ್ಭವವಾಗಿವೆ. ಅರ್ಜಿಯಲ್ಲಿನ ಎಲ್ಲ ಪಕ್ಷಗಾರರ ವಾದ ಮತ್ತು ಕಾನೂನಿನ ನಿಬಂಧನೆಗಳನ್ನು ಸೂಕ್ಷ್ಮವಾಗಿ ಆಲಿಸಿದಾಗ ಇದು ಮನದಟ್ಟಾಗಿದೆ’ ಎಂದು ನ್ಯಾಯಪೀಠ ಹೇಳಿದೆ.
‘ಕೇಂದ್ರ ಸರ್ಕಾರವು ಎಲ್ಲಿಯವರೆಗೆ ರಾಜ್ಯವೊಂದರಲ್ಲಿ ಸಿಬಿಐ ಅನ್ನು ಕಾರ್ಯನಿರ್ವಹಣೆಗೆ ಹಚ್ಚಬಹುದು ಎಂಬುದು ಕಾನೂನಿನ ವಿಚಾರಕ್ಕೆ ಒಳಪಟ್ಟಿದೆ. ಈ ಪ್ರಕರಣದಲ್ಲಿ ರಾಜ್ಯ ಪ್ರಕರಣದಲ್ಲಿನ ಕಾನೂನಿನ ವಿಚಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಸಂಬಂಧಿಸಿವೆ. ಅಂತೆಯೇ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವೆ ಸಂಘರ್ಷ ಇದ್ದು ಪ್ರಕರಣವನ್ನು ಸಂವಿಧಾನದ 131ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ಧರಿಸುವುದೇ ಸೂಕ್ತವಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಈ ಕಾರಣಗಳಿಂದ ಎರಡೂ ಅರ್ಜಿಗಳು ಅನೂರ್ಜಿತವಾಗಲಿದ್ದು, ಇವುಗಳನ್ನು ವಜಾಗೊಳಿಸಲಾಗಿದೆ. ಅದಾಗ್ಯೂ, ಅರ್ಜಿದಾರರು ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಬಿಜೆಪಿ ಸರ್ಕಾರ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ 2019ರ ಸೆಪ್ಟೆಂಬರ್ 25ರಂದು ಅನುಮತಿ ನೀಡಿತ್ತು. ಈ ಅನುಮತಿಯನ್ನು ಈಗಿನ ಕಾಂಗ್ರೆಸ್ ಸರ್ಕಾರ 2023ರ ನವೆಂಬರ್ 23ರಂದು ಹಿಂಪಡೆದಿತ್ತು. ನಂತರ 2023ರ ಡಿಸೆಂಬರ್ 28ರಂದು ಲೋಕಾಯುಕ್ತ ತನಿಖೆಗೆ ವಹಿಸಿತ್ತು.
ಇದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಆಗಸ್ಟ್ 12ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.
ಸಿಎಂ ಪ್ರಕರಣ: ನಾಳೆಗೆ ವಿಚಾರಣೆ ಮುಂದೂಡಿಕೆ
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಬೇಕು ಮತ್ತು ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು’ ಎಂಬ ಈ ಹಿಂದಿನ ಆದೇಶವನ್ನು ಹೈಕೋರ್ಟ್ ಇದೇ 31ರವರೆಗೆ ವಿಸ್ತರಿಸಿದೆ.
ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದರು.
ನಾನು ಸಾಯುವವರೆಗೂ ನನ್ನ ಸ್ನೇಹಿತರು ತೊಂದರೆ ಕೊಡುತ್ತಲೇ ಇರುತ್ತಾರೆ. ಅಂಥವುಗಳನ್ನು ಎದುರಿಸಲು ಸಿದ್ಧನಿದ್ದೇನೆಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಭ್ರಷ್ಟಾಚಾರದ ವಿರುದ್ಧದ ಸಮರ ಇಲ್ಲಿಗೇ ನಿಲ್ಲದು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಹೈಕೋರ್ಟ್ ತೀರ್ಪನ್ನು ಗೌರವಿಸುತ್ತಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.