ADVERTISEMENT

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾ ಮಾಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 9:39 IST
Last Updated 21 ಅಕ್ಟೋಬರ್ 2024, 9:39 IST
<div class="paragraphs"><p>ಪ್ರಜ್ವಲ್ ರೇವಣ್ಣ</p></div>

ಪ್ರಜ್ವಲ್ ರೇವಣ್ಣ

   

ಬೆಂಗಳೂರು: ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಪ್ರಕರಣದಲ್ಲಿ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್‌, ‘ಮೇಲ್ನೋಟಕ್ಕೆ ಪ್ರಜ್ವಲ್‌ ಒಬ್ಬ ಲಂಪಟ ಹಾಗೂ ತನ್ನ ಇಂದ್ರಿಯಗಳ ಮೇಲಿನ ನಿಯಂತ್ರಣ ಕಳೆದುಕೊಂಡು, ಕಾಮಾತುರನಾಗಿ ವರ್ತಿಸಿದ್ದು, ಈ ನೀಚತನದ ಕೃತ್ಯಗಳು ಸ್ವಸ್ಥ ಸಮಾಜದ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸುವಂತಿದೆ’ ಎಂದು ಹೈಕೋರ್ಟ್‌ ಆಘಾತ ವ್ಯಕ್ತಪಡಿಸಿದೆ.

ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಒಂದು ನಿಯಮಿತ ಜಾಮೀನು ಮತ್ತು ಎರಡು ನಿರೀಕ್ಷಣಾ ಅರ್ಜಿಗಳ ಮೇಲಿನ ಸುದೀರ್ಘ ವಿಚಾರಣೆ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿತು. 

ADVERTISEMENT

ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮನೆ ಕೆಲಸದಾಕೆ ನೀಡಿರುವ ದೂರಿನ ಅನ್ವಯ ಅತ್ಯಾಚಾರದ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ನಿಯಮಿತ ಜಾಮೀನು ಕೋರಿದ್ದರು. ಇದರಲ್ಲಿ ಅವರು ಎರಡನೇ ಆರೋಪಿಯಾಗಿದ್ದಾರೆ. ಮೊದಲನೇ ಆರೋಪಿ ಜೆಡಿಎಸ್‌ನ ಶಾಸಕ ಮತ್ತು ಪ್ರಜ್ವಲ್‌ ಅವರ ತಂದೆಯೂ ಆದ ಎಚ್‌.ಡಿ.ರೇವಣ್ಣ ಈಗಾಗಲೇ ಜಾಮೀನು ಪಡೆದಿದ್ದಾರೆ.

‘ನನ್ನ ಪುತ್ರನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಕಲ್ಪಿಸಲು ನೆರವು ಕೋರಿದಾಗ ನನ್ನನ್ನು ಆಮಿಷವೊಡ್ಡಿ ಪುಸಲಾಯಿಸಿ ನನ್ನ ನಗ್ನ ಚಿತ್ರ ಮತ್ತು ವಿಡಿಯೊ ಸೆರೆ ಹಿಡಿದಿದ್ದಾರೆ’ ಎಂಬ ಮಧ್ಯವಯಸ್ಸಿನ ಮಹಿಳೆಯೊಬ್ಬರ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಜ್ವಲ್‌ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಈ ಎರಡೂ ಪ್ರಕರಣಗಳು ಬೆಂಗಳೂರಿನ ಸಿಐಡಿ ಸೈಬರ್‌ ಠಾಣೆಯಲ್ಲಿ ದಾಖಲಾಗಿವೆ. ಪ್ರಜ್ವಲ್‌ ವಿರುದ್ಧ ಒಟ್ಟು ನಾಲ್ಕು ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.