ಬೆಂಗಳೂರು: ‘ರಾಜ್ಯದಲ್ಲಿನ ಕೈಗಾರಿಕೆಗಳು–ಕಾರ್ಖಾನೆಗಳು ಮತ್ತು ಇತರೆ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ನಗರದ ಬಿಳೇಕಹಳ್ಳಿಯ ಸೋಮೇಶ್ವರ ಲೇ-ಔಟ್‌ನ ಲೆಕ್ಕ ಪರಿಶೋಧಕಿ ಆರ್.ಅಮೃತಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
‘ಅರ್ಜಿದಾರರು ಆಕ್ಷೇಪಿಸಿರುವ ಮಸೂದೆ ಇನ್ನೂ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ಸದ್ಯ ಕರಡು ಸ್ವರೂಪದಲ್ಲಿದ್ದು ಇನ್ನೂ ಕಾನೂನಿನ ಮಾನ್ಯತೆ ಪಡೆದುಕೊಂಡಿಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು.
‘ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯು ಸಂವಿಧಾದ 19 (1) (ಡಿ), 19 (1)(ಇ), 19 (1)(ಜಿ) ಮತ್ತು 14ನೇ ವಿಧಿಗಳಿಗೆ ವಿರುದ್ಧವಾಗಿದೆ. ಈ ಮಸೂದೆ ಅನುಷ್ಠಾನಗೊಂಡಲ್ಲಿ ಇದು ಸ್ವಾಭಾವಿಕ ನ್ಯಾಯತತ್ವಗಳ ಉಲ್ಲಂಘನೆಯಾಗುತ್ತದೆ. ಅಂತೆಯೇ, ಈ ಕಾಯ್ದೆಯನ್ನು ಜಾರಿಗೊಳಿಸುವ ಸಾಮರ್ಥ್ಯವನ್ನು ರಾಜ್ಯದ ಶಾಸಕಾಂಗ ಹೊಂದಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.