ಬೆಂಗಳೂರು: ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಒದಗಿಸಿದ್ದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹಕ್ಕೆ ಕಾರಣಗಳಿವು:
*ಪ್ರಜ್ವಲ್ ರೇವಣ್ಣ ಅವರು ಮೆಸರ್ಸ್ ಅಧಿಕಾರ್ ವೆಂಚರ್ಸ್ ಎಲ್‌ಎಲ್‌ಪಿ ಹಾಗೂ ದ್ರೋಣ ವರ್ಕ್ ಫೋರ್ಸ್ ಎಲ್‌ಎಲ್‌ಪಿ ಸಂಸ್ಥೆಗಳಲ್ಲಿನ ಪಾಲುದಾರಿಕೆ ಮತ್ತು ಮಾಲಿಕತ್ವದ ವಿವರಗಳನ್ನು ಬಹಿರಂಗಪಡಿಸಿಲ್ಲ.
*ಚುನಾವಣೆಗೆ ಸ್ಪರ್ಧಿಸುವಾಗ ಅಂದಿನ ದಿನಕ್ಕೆ ಅನು ಗುಣವಾಗಿ ಕಳೆದ 5 ವರ್ಷಗಳ ಆದಾಯ ತೆರಿಗೆ ಪಾವತಿಯ ಮಾಹಿತಿ ಸಲ್ಲಿಸಬೇಕು. ಆದರೆ, ಪ್ರಜ್ವಲ್ ರೇವಣ್ಣ 2008ರಿಂದ 2018ರ ಅವಧಿಯಲ್ಲಿ ದೊಡ್ಡ ಮೊತ್ತದ ಆದಾಯ ಮತ್ತು ಆಸ್ತಿ ಸಂಪಾದಿಸಿದ್ದರೂ, 2018-19ನೇ ಸಾಲಿನ ಆದಾಯ ತೆರಿಗೆ ಮಾಹಿತಿ ಮಾತ್ರ ಒದಗಿಸಿದ್ದಾರೆ.
*ಸ್ಥಿರ ಮತ್ತು ಚರಾಸ್ತಿಗಳ ಕುರಿತು ಅಸಮರ್ಪಕ ಮಾಹಿತಿ ನೀಡಿದ್ದು, ಅನೇಕ ಅಂಶಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಮರೆ ಮಾಚಲಾಗಿದೆ.
*ತಂದೆ ಎಚ್.ಡಿ. ರೇವಣ್ಣ ಅವರಿಂದ ದೊಡ್ಡ ಮೊತ್ತದ ಅಂದರೆ, ₹ 1.26 ಕೋಟಿ ಸಾಲ ಪಡೆದಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದರೆ, ಎಚ್.ಡಿ.ರೇವಣ್ಣ ಲೋಕಾಯುಕ್ತಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಮಗನಿಗೆ ₹ 47.36 ಲಕ್ಷ ಸಾಲ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
*ಪ್ರಜ್ವಲ್ ರೇವಣ್ಣ ತಮ್ಮ ವ್ಯಾಪಾರದ ಆದಾಯ ₹ 7.48 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಆದಾಯದ ಮೂಲ ಯಾವುದು ಎಂಬುದನ್ನು ಬಹಿರಂಗಪಡಿಸಿಲ್ಲ.
*2019ರ ಮಾರ್ಚ್ 22ಕ್ಕೆ ಅನ್ವಯವಾಗುವಂತೆ ಬ್ಯಾಂಕ್ ಬ್ಯಾಲೆನ್ಸ್ ₹5.78 ಲಕ್ಷ ಎಂದು ಪ್ರಮಾಣ ಪತ್ರದಲ್ಲಿ ತೋರಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಅದು ₹ 49.09 ಲಕ್ಷ ಆಗಿತ್ತು.
*ರಾಜ್ಯಸಭಾ ಸದಸ್ಯರಾಗಿದ್ದ ಕುಪೇಂದ್ರ ರೆಡ್ಡಿ ಅವರಿಂದ ಪಡೆದುಕೊಂಡಿದ್ದ ₹ 50 ಲಕ್ಷದ ಮಾಹಿತಿಯನ್ನೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ.
ಆರೋಪಗಳು
ಲೋಕಸಭೆಗೆ 2019ರ ಏಪ್ರಿಲ್ 18ರಂದು ಚುನಾವಣೆ ನಡೆದು, ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತು. ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಎರಡನೇ ಸ್ಥಾನ ಗಳಿಸಿದ್ದರು. ‘ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಿ ಜಯಗಳಿಸಿದ್ದಾರೆ. ಹೀಗಾಗಿ, ಅವರ ಲೋಕಸಭೆ ಸದಸ್ಯತ್ವವನ್ನು ಅನೂರ್ಜಿತಗೊಳಿಸಬೇಕು’ ಎಂದು ಕೋರಿ ಪರಾಜಿತ ಅಭ್ಯರ್ಥಿ ಎ.ಮಂಜು ಮತ್ತು ಕಾಂಗ್ರೆಸ್ ಮುಖಂಡರಾಗಿದ್ದ, ನಂತರ ಬಿಜೆಪಿಗೆ ಸೇರಿದ್ದ ಜಿ.ದೇವರಾಜೇ ಗೌಡ 2019ರಲ್ಲಿ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.