ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ನೌಕರರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆ ನಡೆಸಲು 2016ರಲ್ಲಿ ರಚಿಸಲಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿರುವ ಹೈಕೋರ್ಟ್, ‘ಎಸಿಬಿ ವ್ಯಾಪ್ತಿಯಲ್ಲಿ ಸದ್ಯ
ತನಿಖೆಗೆ ಒಳಪಟ್ಟಿರುವ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು’ ಎಂದು ಮಹತ್ವದ ತೀರ್ಪು ನೀಡಿದೆ.
ರಾಜ್ಯ ಸರ್ಕಾರ 2016ರ ಮಾರ್ಚ್ 19ರಂದು ಎಸಿಬಿ ರಚನೆ ಮಾಡಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ, ಬೆಂಗಳೂರು ವಕೀಲರ ಸಂಘ ಮತ್ತು ವಕೀಲ ಬಿ.ಜಿ. ಚಿದಾನಂದ ಅರಸ್ ಸೇರಿದಂತೆ 15 ಜನರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿದೆ.
‘ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿರುವ ನ್ಯಾಯಪೀಠ, ’ಈಗಾಗಲೇ ಎಸಿಬಿ ಮುಂದೆ ಬಾಕಿ ಇರುವ ತನಿಖಾ, ವಿಚಾರಣಾ ಮತ್ತು ಶಿಸ್ತುಕ್ರಮದ ಅಡಿಯಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕು’ ಎಂದು ಹೇಳಿದೆ.
‘ಆದಾಗ್ಯೂ, ಈತನಕ ಎಸಿಬಿಯು ತನಿಖೆ, ವಿಚಾರಣೆ ಮತ್ತು ಶಿಸ್ತುಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀಡಿರುವ ಶಿಕ್ಷೆ ಅಥವಾ ಬಿಡುಗಡೆಯ ಆದೇಶಗಳನ್ನು ಎಸಿಬಿ ಆದೇಶಕ್ಕೆ ಅನುಗುಣವಾಗಿ ಕಾಪಾಡಿಕೊಂಡು ಹೋಗತಕ್ಕದ್ದು ಮತ್ತು ಎಸಿಬಿ ಮುಂದಿದ್ದ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಈಗ ಅವು ಯಾವ ಹಂತದಲ್ಲಿವೆಯೋ ಅಲ್ಲಿಂದ ಮುಂದುವರಿಸಿಕೊಂಡು ಹೋಗಬೇಕು’ ಎಂದು ನಿರ್ದೇಶಿಸಿದೆ.
ದಂಡ ಪ್ರಕ್ರಿಯಾ ಸಂಹಿತೆ ಕಲಂ 2 (ಎಸ್) ಅಡಿಯಲ್ಲಿ 1991ರ ಫೆಬ್ರುವರಿ 6, 2002ರ ಮೇ 8 ಮತ್ತು 2002ರ ಡಿಸೆಂಬರ್ 5ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಅನುಸಾರ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ನೀಡಲಾಗಿರುವ ತನಿಖಾಧಿಕಾರವನ್ನು ಮರುಸ್ಥಾಪಿಸಿ ಆದೇಶಿಸಲಾಗಿದೆ.
‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗಿದ್ದ ಅಧಿಕಾರವನ್ನು ಹಿಂಪಡೆದಿರುವ ಅಧಿಸೂಚನೆಯನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದ್ದು,ಕರ್ನಾಟಕ ಲೋಕಾಯುಕ್ತ ಕಾಯ್ದೆ–1988ರ ಕಲಂ 12(4)ಕ್ಕೆ ತುರ್ತಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಚಿದಾನಂದ ಅರಸ್ ಪರ ಹಿರಿಯ ವಕೀಲ ರವಿ.ಬಿ.ನಾಯಕ್, ಕೆ.ಬಿ.ಮೋನೇಶ್ ಕುಮಾರ್ ಸೇರಿದಂತೆ ಪ್ರತ್ಯೇಕ ಅರ್ಜಿದಾರರ ಪರ ಖ್ಯಾತ ವಕೀಲರ ದಂಡೇ ಪ್ರಕರಣದಲ್ಲಿ ವಾದ ಮಂಡಿಸಿತ್ತು.
ರಾಜ್ಯ ಸರ್ಕಾರಕ್ಕೆಶಿಫಾರಸುಗಳು
*ಜನಕಲ್ಯಾಣದ ಬಗ್ಗೆ ನಿಜವಾದ ಕಾಳಜಿ ಹೊಂದಿದ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಸಚ್ಚಾರಿತ್ರ್ಯವಂತರನ್ನುಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆಗಳಿಗೆ ನೇಮಕ ಮಾಡಬೇಕು.
* ಹುದ್ದೆಗಳು ರಾಜಕೀಯ ಪ್ರೇರಿತವಾಗಿರಬಾರದು ಮತ್ತು ಕೆಲವರ ಪಾಲಿನ ಪುನರ್ವಸತಿ ಕೇಂದ್ರಗಳಾಗಬಾರದು.
* ಲೋಕಾಯುಕ್ತ ಹುದ್ದೆಗಳಿಗೆ ನಡೆಯುವ ನೇಮಕ ಪಾರದರ್ಶಕವಾಗಿರಬೇಕು.ಉತ್ತಮ ಹಿನ್ನೆಲೆ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿ ಅದನ್ನು ಸದೃಢಗೊಳಿಸಬೇಕು.
* ಈಗ ಎಸಿಬಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಕಾಯುಕ್ತ ಆಡಳಿತ ವ್ಯಾಪ್ತಿಗೆ ಒಳಪಡಲಿದ್ದಾರೆ.
* ತನಿಖೆಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ವ್ಯಾಜ್ಯದಲ್ಲಿರುವ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಅಗತ್ಯ ಕ್ರಮ ಕೈಗೊಳ್ಳಬೇಕು.
* ಕನಿಷ್ಠ ಮೂರು ವರ್ಷ ಕರ್ತವ್ಯ ಪೂರ್ಣಗೊಳಿಸದ ಅಧಿಕಾರಿ ಅಥವಾ ಸಿಬ್ಬಂದಿಯನ್ನುಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಅನುಮತಿ ಪಡೆಯದೇ ವರ್ಗಾವಣೆ ಮಾಡುವಂತಿಲ್ಲ.
ತೀರ್ಪಿಗೆ ಪ್ರತಿಕ್ರಿಯೆಗಳು
ತೀರ್ಪಿನ ಸಂಪೂರ್ಣ ಅಧ್ಯಯನ ಮಾಡಬೇಕು. ಈ ಹಂತದಲ್ಲಿ ಏನನ್ನಾದರೂ ಹೇಳುವುದು ಕಷ್ಟ.
ಪ್ರಭುಲಿಂಗ ಕೆ.ನಾವದಗಿ, ಅಡ್ವೊಕೇಟ್ ಜನರಲ್
ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕೇವಲ ಒಂದು ಸಂಸ್ಥೆ ತನಿಖೆ ನಡೆಸಬೇಕು.ತನಿಖೆ ರಾಜಕೀಯ ಮಧ್ಯಪ್ರವೇಶದಿಂದ ಮುಕ್ತವಾಗಿರಬೇಕು ಎಂಬ ಲೋಕಾಯಕ್ತ ಕಾಯ್ದೆಯ ಆಶಯ ಈಡೇರಿದಂತಾಗಿದೆ. ಆಡಳಿತ ಸುಧಾರಣೆಗಾಗಿ ರಚಿಸಲಾದ ಲೋಕಾಯುಕ್ತ ಸಂಸ್ಥೆಯ ಸ್ಥಾಪನೆಯ ಮುಖ್ಯ ಉದ್ದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.
ವಿ.ಲಕ್ಷ್ಮಿನಾರಾಯಣ, ಪ್ರಕರಣದಲ್ಲಿ ಅಮಿಕಸ್ ಕ್ಯೂರಿ
ಎಸಿಬಿ ಸರ್ಕಾರದ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿತ್ತು. ಸರ್ಕಾರದ ಪ್ರಮುಖ ಸ್ಥಾನದಲ್ಲಿದ್ದವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ಸಹಜವಾಗಿಯೇ ಅಲ್ಲಿ ಸರ್ಕಾರಿ ನಿಯಂತ್ರಣ ಇರುತ್ತಿತ್ತು. ಈಗ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶ ದೊರೆತಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತರು ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.
ಅಶೋಕ ಹಾರನಹಳ್ಳಿ,ಲೋಕಾಯುಕ್ತ ಪರ ಹಾಜರಾಗಿದ್ದ ಹಿರಿಯ ವಕೀಲರು
ಕಳೆದ ನಾಲ್ಕು ವರ್ಷಗಳಿಂದ ಎಸಿಬಿಯಲ್ಲಿ ನಡೆಯುತ್ತಿದ್ದ ವ್ಯಾಪಕ ಭ್ರಷ್ಟಾಚಾರವೇ ಈ ತೀರ್ಪಿಗೆ ಕಾರಣ.ಭ್ರಷ್ಟಾಚಾರ ನಿಗ್ರಹ ಮಾಡಬೇಕಾದ ಸಂಸ್ಥೆಯೇ ಭ್ರಷ್ಟಾಚಾರದಲ್ಲಿ ತೊಡಗಿದ್ದ ಕಾರಣ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ತೀರ್ಪಿಗೆ ತಲೆಬಾಗಲೇ ಬೇಕು. ಸಂವಿಧಾನ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಎಸಿಬಿಯನ್ನು ರಚಿಸುವ ಅಧಿಕಾರ ಸರ್ಕಾರಕ್ಕೆ ಇದೆ.
ಎ.ಎಸ್.ಪೊನ್ನಣ್ಣ, ಹಿರಿಯ ವಕೀಲರು, ಕಾಂಗ್ರೆಸ್ ಆಡಳಿತದಲ್ಲಿ ಎಸಿಬಿ ರಚನೆ ಸಮರ್ಥಿಸಿಕೊಂಡಿದ್ದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್
ರಾಜ್ಯದ ಜನರಿಗೆ ಸಂದ ವಿಜಯ
ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪು ಕರ್ನಾಟಕದ ಜನರಿಗೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ನಾಗರಿಕ ಸಮಾಜಕ್ಕೆ ಸಂದ ವಿಜಯ. ಇದೊಂದು ಐತಿಹಾಸಿಕ ತೀರ್ಪಾಗಿ ಉಳಿಯಲಿದೆ. ಲೋಕಾಯುಕ್ತ ಸಂಸ್ಥೆಯನ್ನು ಸಶಕ್ತ ಮಾಡುವ ಬದಲು ಅದನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದರು. ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲೇ ಲೋಕಾಯುಕ್ತಕ್ಕೆ ಅಧಿಕಾರ ಹೆಚ್ಚಿಸುವ ಭರವಸೆಯನ್ನು ಬಿಜೆಪಿ ನೀಡಿತ್ತು. ಆದರೆ, ಈಡೇರಿಸಲಿಲ್ಲ. ಈಗ ಅದನ್ನು ಹೈಕೋರ್ಟ್ ಸರಿಪಡಿಸಿದೆ. ಸುಪ್ರೀಂ ಕೋರ್ಟ್‌ಗೆ ಹೋದರೂ ಸರ್ಕಾರಕ್ಕೆ ಛೀಮಾರಿ ಬೀಳಲಿದೆ. ಸಾರ್ವಜನಿಕರ ಹಣ ವೆಚ್ಚ ಮಾಡಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಯತ್ನ ಮಾಡಬಾರದು.
–ಎಸ್.ಆರ್.ಹಿರೇಮಠ,ಸಮಾಜ ಪರಿವರ್ತನಾ ಸಮುದಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.