ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪಗಳ ವಿಚಾರಣೆಗೆ ಹಸಿರು ನಿಶಾನೆ ತೋರಿಸಿರುವ ಹೈಕೋರ್ಟ್, ಈ ಸಂಬಂಧ ಚಿತ್ರದುರ್ಗ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಈಗಾಗಲೇ ಹೊರಿಸಿರುವ ದೋಷಾರೋಪಗಳನ್ನು ಮರು ನಿಗದಿಗೊಳಿಸಿ ವಿಚಾರಣೆ ಆರಂಭಿಸುವಂತೆ ಆದೇಶಿಸಿದೆ.
‘ನನ್ನ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ನಿಗದಿಪಡಿಸಿರುವ ದೋಷಾರೋಪಗಳನ್ನು ರದ್ದುಗೊಳಿಸಬೇಕು’ ಎಂದು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿತು. ತೀರ್ಪಿನ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ್ದರು. ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದ್ದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ತದನಂತರ ಹೈಕೋರ್ಟ್ ಅವರಿಗೆ 2023ರ ನವೆಂಬರ್ 8ರಂದು ಜಾಮೀನು ನೀಡಿತ್ತು.
ಏತನ್ಮಧ್ಯೆ, ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಈ ಸಂಬಂಧ ಚಿತ್ರದುರ್ಗ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶರಣರ ವಿರುದ್ಧ ದೋಷಾರೋಪ ನಿಗದಿಪಡಿಸಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿ 2023ರ ಏಪ್ರಿಲ್‌ನಲ್ಲಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಶರಣರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ನಾಲ್ಕೂ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳಲ್ಲಿನ ಮನವಿಗಳನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿನ ದೋಷಾರೋಪಗಳನ್ನು ರದ್ದುಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.