ADVERTISEMENT

BSY ವಿರುದ್ಧದ ಪೋಕ್ಸೊ ಪ್ರಕರಣ; ಸತ್ಯ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ:ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 14:16 IST
Last Updated 14 ಜೂನ್ 2024, 14:16 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬೆಂಗಳೂರು: ಹದಿನೇಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಬಂಧನ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿ ಆದೇಶಿಸಿರುವ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪ ಅವರ ಮೇಲಿನ ಕರುನಾಡ ಜನರ ಆಶೀರ್ವಾದ, ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ. ಷಡ್ಯಂತ್ರ, ಪಿತೂರಿ ರಾಜಕಾರಣ ಯಡಿಯೂರಪ್ಪ ಅವರನ್ನು ಹಿಂಬಾಲಿಸಿಕೊಂಡು ಬರುತ್ತಲೇ ಇದೆ. ಎದೆಗುಂದದ ಅವರು ನ್ಯಾಯದ ಹಾದಿಯಲ್ಲಿ ಷಡ್ಯಂತ್ರಗಳನ್ನು ಜಯಿಸಿದ್ದಾರೆ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಇಂದು ಉಚ್ಚ ನ್ಯಾಯಾಲಯದಲ್ಲಿ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪಗೆ ಮಧ್ಯಂತರ ಜಾಮೀನು ನೀಡಿದೆ. ಜತೆಗೆ, ಯಡಿಯೂರಪ್ಪನವರು ವಿಚಾರಣೆಗಳಿಗೆ ಬೆನ್ನು ತೋರಿಸುವ ಜಾಯಮಾನದವರಲ್ಲ’ ಎನ್ನುವ ಮಾತನ್ನು ಉಲ್ಲೇಖಿಸಿರುವುದು ಯಡಿಯೂರಪ್ಪನವರು ಈ ನೆಲದ ಕಾನೂನಿಗೆ ಗೌರವ ಕೊಡುವ ಪರಿಯನ್ನು ಎತ್ತಿ ತೋರಿಸುತ್ತದೆ. ಮುಂದಿನ ದಿನಗಳಲ್ಲಿ ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸುವುದಕ್ಕಾಗಿ ಪೋಕ್ಸೊ ವಿಚಾರಣಾ ವಿಶೇಷ ನ್ಯಾಯಾಲಯದ ಜಾಮೀನು ರಹಿತ ಬಂಧನ ವಾರೆಂಟ್‌ ಅನುಮತಿಸಲಾಗಿದ್ದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ ಗುರುವಾರವಷ್ಟೇ ಹೊರಡಿಸಿದ್ದ ಆದೇಶ, ಎಫ್‌ಐಆರ್ ರದ್ದುಗೊಳಿಸುವ ಅರ್ಜಿ, ತಕ್ಷಣವೇ ಬಂಧಿಸಲು ಕೋರಲಾದ ಅರ್ಜಿ ಹೀಗೆ ಮೂರು ಪ್ರತ್ಯೇಕ ಅರ್ಜಿಗಳನ್ನು, ‘ಶಾಸಕರು– ಸಂಸದರು ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ ವಿಶೇಷ ನ್ಯಾಯಪೀಠದಲ್ಲಿ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಶುಕ್ರವಾರ ವಿಚಾರಣೆ ನಡೆಸಿದ್ದಾರೆ.

ಬಂಧನ ಆದೇಶ ಪ್ರಶ್ನಿಸಿ ವಿಚಾರಣೆ ನಡೆಸಿದ ಪೀಠವು, ಯಡಿಯೂರಪ್ಪ ವಿರುದ್ಧದ ಬಲವಂತದ ಕ್ರಮಕ್ಕೆ ಮುಂದಿನ ವಿಚಾರಣೆವರೆಗೂ ತಡೆ ನೀಡಿದೆ.

‘ಮುಂದಿನ ಎರಡು ವಾರಗಳ ಕಾಲ ಯಾವುದೇ ಒತ್ತಾಯದ ಕ್ರಮ ಬೇಡ. ಅವರನ್ನು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ. ಜತೆಗೆ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಪೊಲೀಸರಿಗೆ ಪೀಠ ನಿರ್ದೇಶನ ನೀಡಿದೆ.

‘ಅವರು ಈಗಾಗಲೇ ಇದೇ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅವರ ಪ್ರತ್ಯುತ್ತರವನ್ನು ಗೌರವಿಸಬೇಕು’ ಎಂದು ಆದೇಶಿಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರು ವಿಚಾರಣೆಯನ್ನು ಎರಡು ವಾರಗಳ ಕಾಲಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.