ADVERTISEMENT

ಮಗುವಿನ ಭವಿಷ್ಯಕ್ಕೆ ಭಾಷ್ಯ ಬರೆದ ಹೈಕೋರ್ಟ್: ಪೋಕ್ಸೊ ಸುಖಾಂತ್ಯಕ್ಕೆ ಪಾಣಿಗ್ರಹಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:28 IST
Last Updated 20 ಜುಲೈ 2024, 15:28 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ಮಗು ಮತ್ತು ತಾಯಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಮಾಜದ ಅಪಕೀರ್ತಿ ತಪ್ಪಿಸಲು ಪ್ರೇಮಿಗಳನ್ನು ಒಂದಾಗಿ ಬಾಳಲು ಇತ್ತೀಚೆಗಷ್ಟೇ ಅನುಮತಿ ನೀಡಿದ್ದ ಹೈಕೋರ್ಟ್, ಯುವಕನೊಬ್ಬನ ವಿರುದ್ಧದ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣವನ್ನು ರದ್ದುಪಡಿಸಿದೆ.

‘ನನ್ನ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣ ರದ್ದುಗೊಳಿಸಬೇಕು‘ ಎಂದು ಕೋರಿ 23 ವರ್ಷದ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಜೈಲಿನಲ್ಲಿರುವ ಯುವಕನ ಬಿಡುಗಡೆಗೆ ರಿಜಿಸ್ಟ್ರಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದೆ.

ADVERTISEMENT

‘ಅರ್ಜಿ ಇತ್ಯರ್ಥವಾಗಿದೆ ಎಂದು ಒಂದು ವೇಳೆ ಮಗು ಮತ್ತು ತಾಯಿಯನ್ನು ಮತ್ತೇನಾದರೂ ಬಿಕ್ಕಟ್ಟಿಗೆ ದೂಡಿದರೆ ಪ್ರಕರಣ ಮರು ಚಾಲನೆ ಪಡೆಯಲಿದೆ’ ಎಂದು ನ್ಯಾಯಪೀಠ ಯುವಕನಿಗೆ ಎಚ್ಚರಿಕೆ ನೀಡಿದೆ.

‘ಮದುವೆಗೂ ಮುನ್ನವೇ ಅರ್ಜಿದಾರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಪರಿಣಾಮ ಮಗು ಜನಿಸಿದೆ. ಮಗುವಿಗೆ ಏನೆಲ್ಲಾ ಘಟನೆ ನಡೆದಿದೆ ಎಂಬುದು ತಿಳಿದಿಲ್ಲ. ಪ್ರಕರಣ ಇತ್ಯರ್ಥಪಡಿಸಿ, ಅರ್ಜಿದಾರನನ್ನು ಬಿಡುಗಡೆ ಮಾಡದೇ ಇದ್ದರೆ ಮಗು ಮತ್ತು ತಾಯಿಯ ಬದುಕು ಬಿಕ್ಕಟ್ಟಿಗೆ ಸಿಲುಕುತ್ತದೆ. ಅರ್ಜಿದಾರ ಮತ್ತು ಸಂತ್ರಸ್ತೆ ವಿವಾಹವಾಗಲು ಈಗಾಗಲೇ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಮದುವೆಯ ಬಳಿಕ ಅರ್ಜಿದಾರ ಜೈಲಿಗೆ ಮರಳಿದ್ದ. ಈ ಪರಿಸ್ಥಿತಿಯಲ್ಲಿ ಇಬ್ಬರ ಮಧ್ಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸದೇ ಇದ್ದರೆ ಮಗು ಮತ್ತು ತಾಯಿಯ ಬದುಕು ಅತಂತ್ರವಾಗಲಿದೆ. ಸಮಾಜದಲ್ಲಿ ಅವರು ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ಪ್ರಕರಣವನ್ನು ರದ್ದುಪಡಿಸುವುದು ಸೂಕ್ತ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

’ಪ್ರಕರಣವನ್ನು ವಾಸ್ತವ ಅಂಶಗಳ ಹಿನ್ನೆಲೆಯಲ್ಲಿ ಗಮನಿಸಿದರೆ ಮುಂದೊಂದು ದಿನ ವಿಚಾರಣೆಯಲ್ಲಿ ಸಂತ್ರಸ್ತೆಯು ನಿಸ್ಸಂಶಯವಾಗಿ ವಿರುದ್ಧವಾದ ಸಾಕ್ಷಿಯನ್ನೇ ನುಡಿಯುತ್ತಾಳೆ‌. ಆಗ ಅರ್ಜಿದಾರನಿಗೆ ಶಿಕ್ಷೆಯಾಗುವುದು ಅಸಾಧ್ಯವಾಗಲಿದೆ. ಹೀಗಾಗಿ, ಕ್ರಿಮಿನಲ್ ಪ್ರಕ್ರಿಯೆ ಕೊನೆಯವರೆಗೂ ವೇದನೆ ತಂದೊಡ್ಡಲಿದೆ. ಇಂತಹ ಸಂಕಟವು, ಖುಲಾಸೆಯ ಸಂತೋಷಕ್ಕೆ ಮಸುಕು ಕವಿಯುವಂತೆ ಮಾಡುತ್ತದೆ’ ಎಂದು ನ್ಯಾಯಪೀಠ ಕಾಳಜಿ ವ್ಯಕ್ತಪಡಿಸಿದೆ.

‘ತಾಯಿ-ತಂದೆ ಮತ್ತು ಮಗುವಿನ ವಂಶವಾಹಿ (ಡಿಎನ್ಎ) ಪರೀಕ್ಷೆ ನಡೆಸಲಾಗಿದ್ದು, ಅರ್ಜಿದಾರ ಮತ್ತು ಸಂತ್ರಸ್ತೆಯೇ ಮಗುವಿನ ಪೋಷಕರುಎಂಬುದು ರುಜುವಾತವಾಗಿದೆ’ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಅರ್ಜಿಯಲ್ಲಿ ಏನಿತ್ತು?:

‘ಸಂತ್ರಸ್ತೆ ಮತ್ತು ಯುವಕ ಪರಸ್ಪರ ಪ್ರೇಮಿಸುತ್ತಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಯುವಕನಿಗೆ 21 ವರ್ಷ ಹಾಗೂ ಸಂತ್ರಸ್ತೆಗೆ 16 ವರ್ಷ 9 ತಿಂಗಳಾಗಿತ್ತು. ಸಂತ್ರಸ್ತೆಯ ತಾಯಿ ಮಗಳನ್ನು ಮದುವೆ ಮಾಡಿಕೊಡಲು ಒಪ್ಪದೇ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿದ್ದರು. ಆದರೆ, ಈಗ ಎರಡೂ ಕುಟುಂಬಗಳು ಮದುವೆಗೆ ನಿಶ್ಚಯಿಸಿದ್ದು, ಅರ್ಜಿದಾರನೂ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದ ಕಾರಣ ಮದುವೆಯಾಗಿದ್ದಾನೆ. ಹೀಗಾಗಿ, ಕಾನೂನು ಪ್ರಕ್ರಿಯೆ ವಜಾ ಮಾಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಸಂತ್ರಸ್ತೆಯನ್ನು ವರಿಸಲು ಅರ್ಜಿದಾರನಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. 2024ರ ಜೂನ್ 21ರಂದು ಮದುವೆ ನೆರವೇರಿತ್ತು.

ಅರ್ಜಿದಾರನ ಪರ ವಕೀಲ ಎಸ್.ವಿ.ರೋಹಿತ್ ಮತ್ತು ಎಂ.ಶರಶ್ಚಂದ್ರ ವಾದ ಮಂಡಿಸಿದ್ದರು.

ಪ್ರಕರಣವೇನು?:

‘ಆರೋಪಿ ಯುವಕ ನನ್ನ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ’ ಎಂದು ಸಂತ್ರಸ್ತೆಯ ತಾಯಿ 2023ರ ಫೆಬ್ರುವರಿ 15ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ಆಧರಿಸಿ ಪೊಲೀಸರು ಯುವಕನ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ-2012ರ ಕಲಂ 5 (ಎಲ್), 5 (ಜೆ)(II), 6 ಹಾಗೂ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 376(2)(ಎನ್), 506ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. 2023ರ ಫೆಬ್ರುವರಿ 16ರಂದೇ ಯುವಕನನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.