ADVERTISEMENT

ಏಕಲವ್ಯ ಪ್ರಶಸ್ತಿ ಮಾರ್ಗಸೂಚಿ: ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 14:23 IST
Last Updated 27 ಜೂನ್ 2024, 14:23 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಏಕಲವ್ಯ ಪ್ರಶಸ್ತಿ’ ಪಡೆಯಲು ಅರ್ಹತೆ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ನಿರಾಕರಿಸಿರುವ ಹೈಕೋರ್ಟ್‌, ‘ನ್ಯಾಯಾಲಯಗಳು ಕ್ರೀಡೆಗಳಲ್ಲಿನ ತೀರ್ಪುಗಾರರಂತೆ ಇರಬೇಕೆ ವಿನಃ ರೆಫರಿಗಳಂತೆ ಅಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಸಂಬಂಧ ರೋಲರ್ ಸ್ಕೇಟಿಂಗ್ ಅಥ್ಲೀಟ್‌ ವಿ.ವರ್ಷಿತ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಸರ್ಕಾರದ ನೀತಿಗಳು ಸಂವಿಧಾನ ಬಾಹಿರ ಹಾಗೂ ದೋಷಪೂರಿತವಾಗಿದ್ದಲ್ಲಿ ಮಾತ್ರವೇ ನ್ಯಾಯಾಲಯದ ಪರಿಶೀಲನೆಗೆ ಒಳಪಡುತ್ತವೆ’ ಎಂದು ಹೇಳಿದೆ.

‘ಸರ್ಕಾರ ಹಾಗೂ ಶಾಸನಬದ್ಧ ಪ್ರಾಧಿಕಾರಗಳು ಎಚ್ಚರಿಕೆಯಿಂದ ರಚಿಸುವ ನೀತಿಗಳ ಬಗ್ಗೆ ನ್ಯಾಯಾಲಯಗಳು ಸದಾ ಸಂಯಮ ಪ್ರದರ್ಶಿಸಬೇಕು. ಸರ್ಕಾರದ ನೀತಿಗಳು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿನ ಸಮಾನತೆ ಉಲ್ಲಂಘನೆ, ಅಸಮಂಜಸ ಹಾಗೂ ದೋಷದಿಂದ ಕೂಡಿದ್ದರೆ ಮಾತ್ರವೇ ಕೋರ್ಟ್‌ ಮಧ್ಯಪ್ರವೇಶಿಸಬಹುದು’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ಪ್ರಕರಣವೇನು?: ‘ಏಕಲವ್ಯ ಪ್ರಶಸ್ತಿ’ ನೀಡಲು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ನಿಗದಿಪಡಿಸುತ್ತದೆ. ಇದರನ್ವಯ 2015ರ ಆಗಸ್ಟ್ 24ರಂದು ಏಕಲವ್ಯ ಪ್ರಶಸ್ತಿಗೆ ಅರ್ಹತೆ ಹೊಂದಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಅರ್ಜಿದಾರರು ಈ ಮಾರ್ಗಸೂಚಿಗಳನ್ನು ಪ್ರಶ್ನಿಸಿದ್ದರು.

ಅರ್ಜಿದಾರರು ರೋಲರ್ ಸ್ಕೇಟಿಂಗ್ ಪಟುವಾಗಿದ್ದು, ರಾಷ್ಟ್ರೀಯ ಕಿರಿಯ, ಹಿರಿಯ ಹಾಗೂ ಏಷ್ಯನ್ ಚಾಂಪಿಯನ್‌ ಶಿಪ್‌ಗಳಲ್ಲಿ ಭಾಗವಹಿಸಿದ್ದು, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.