ADVERTISEMENT

₹300 ಲಂಚ: ಟೈಪಿಸ್ಟ್‌ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:42 IST
Last Updated 18 ಅಕ್ಟೋಬರ್ 2024, 15:42 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಮೈಸೂರು ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯ ಮಹಿಳಾ ಟೈಪಿಸ್ಟ್‌ ₹300 ಲಂಚ ಪಡೆದಿದ್ದಾರೆ’ ಎಂಬ ಆರೋಪದಡಿ ಅವರನ್ನು ಸೇವೆಯಿಂದ ವಜಾಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಈ ಸಂಬಂಧ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದ್ದು, ಪ್ರತಿವಾದಿ ಟೈಪಿಸ್ಟ್‌ಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಕೆಎಟಿ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.

ADVERTISEMENT

‘ವಜಾಗೊಳಿಸಿದ್ದ ಸರ್ಕಾರದ ಆದೇಶವನ್ನು ಮಾರ್ಪಾಡು ಮಾಡಿರುವ ಕೆಎಟಿ, ಕಡ್ಡಾಯ ನಿವೃತ್ತಿ ಘೋಷಣೆಗೆ ನಿರ್ದೇಶಿಸಿದೆ. ಆದರೆ, ಈ ರೀತಿಯ ಆದೇಶ ನೀಡಲು ಕೆಎಟಿಗೆ ಅವಕಾಶವಿಲ್ಲ. ಸಾರ್ವಜನಿಕ ಸೇವಕರು ಲಂಚಕ್ಕೆ ಬೇಡಿಕೆ ಇರಿಸುವುದು ಮತ್ತು ಪಡೆಯುವುದು ಸಾಮಾಜಿಕ ನೈತಿಕತೆಯ ಪಾಲಿಗೆ ಗಂಭೀರ ವಿಷಯ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ದುರ್ನಡತೆ ಆರೋಪದಡಿ ಪ್ರತಿವಾದಿ ಟೈಪಿಸ್ಟ್‌ ಮಹಿಳೆಯನ್ನು ರಾಜ್ಯ ಸರ್ಕಾರ, ಕರ್ನಾಟಕ ನಾಗರಿಕ ಸೇವೆ (ನಡವಳಿಕೆ) ನಿಯಮಗಳು–1966ರ ಅಡಿಯಲ್ಲಿ 2014ರ ಜುಲೈ 24ರಂದು ಸೇವೆಯಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಕೆಎಟಿ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ್ದ ಕೆಎಟಿ, ‘ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾಗಿಲ್ಲ’ ಎಂಬ ಕಾರಣಕ್ಕೆ ಸರ್ಕಾರದ ವಜಾ ಆದೇಶವನ್ನು ರದ್ದುಪಡಿಸಿತ್ತು ಮತ್ತು ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.