ಬೆಂಗಳೂರು: ‘ಬೆಕ್ಕು ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಅದನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ’ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಈ ಸಂಬಂಧ ಆನೇಕಲ್ ತಾಲ್ಲೂಕಿನ ಶಿಕಾರಿಪಾಳ್ಯದ ಸಿರಾಜ್ ಲೇಔಟ್ ನಿವಾಸಿ ತಾಹಾ ಹುಸೈನ್ ಬಿನ್ ಖಾಲಿದ್ ಮೆಹಬೂಬ್ (31) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಜಿ.ದೇವರಾಜ್, ‘ಬೆಕ್ಕುಗಳು ಕಿಟಕಿಯಿಂದ ಮನೆಯ ಒಳಗೆ ಬರುವುದು ಮತ್ತು ಹೋಗುವುದು ಸಹಜ ಪ್ರಕ್ರಿಯೆ. ಇಂತಹ ಕ್ಷುಲ್ಲಕ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಡಿ ಮುಂದಿನ ವಿಚಾರಣೆಗೆ ಅನುಮತಿ ನೀಡುವುದರಿಂದ ಅಪರಾಧಿಕ ನ್ಯಾಯಿಕ ವ್ಯವಸ್ಥೆಗೆ ಅಡ್ಡಿ ಉಂಟಾಗುತ್ತದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣದ ಮುಂದಿನ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ದೋಷಾರೋಪ ಪಟ್ಟಿ ಸಲ್ಲಿಸಿರುವ ಪೊಲೀಸರ ನಡೆಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ಅಯ್ಯೋ ದೇವರೇ..! ‘ಪೊಲೀಸರು ನಿಜವಾದ ಅಪರಾಧ ಪ್ರಕರಣಗಳ ಬೆನ್ನಟ್ಟವುದು ಬಿಟ್ಟು, ಬೆಕ್ಕು ಕಾಣೆಯಾದ ಪ್ರಕರಣದ ಬೆನ್ನುಬಿದ್ದಿದ್ದಾರೆ. ಬೆಕ್ಕು ಎಲ್ಲರ ಮನೆಗೆ ಒಳಗೆ ಹೋಗಿ ಹೊರಬಂದಿದೆ. ಇದರಿಂದ ಬೆಕ್ಕು ಕಾಣೆಯಾಗಿದೆ ಎಂದು ದೂರು ನೀಡಿದರೆ, ಅದನ್ನು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.
ಅಂತೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದಿನ ವಿಚಾರಣೆಗೆ ತಡೆ ನೀಡಿ ಆದೇಶಿಸಿದರು.
ಪ್ರಕರಣವೇನು?: ‘ನಾನು ಸಾಕಿದ್ದ ಡೈಸಿ ಬೆಕ್ಕನ್ನು ತಾಹಾ ಹುಸೈನ್ ತಮ್ಮ ಮನೆಯಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಅವರು ನನ್ನ ಬೆಕ್ಕನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವುದು ನಮ್ಮ ಮನೆಯ ಸಿಸಿಟಿವಿ ಯಲ್ಲಿ ಪತ್ತೆಯಾಗಿದೆ’ ಎಂದು ಆರೋಪಿಸಿ ಬೆಕ್ಕು ಕಳವು ಮಾಡಿದ ಆರೋಪದಡಿ ಆನೇಕಲ್ ಶಿಕಾರಿಪಾಳ್ಯದ ಸಿರಾಜ್ ಲೇಔಟ್‌ನ ಎರಡನೇ ಕ್ರಾಸ್ ನಿವಾಸಿ ನಿಖಿತಾ ಅಂಜನಾ ಅಯ್ಯರ್ (41) ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಅನ್ವಯ ತಾಹಾ ಹುಸೈನ್ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 504, 506 ಮತ್ತು 509ರ ಅಡಿಯಲ್ಲಿ ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.