ADVERTISEMENT

ಹಿಜಾಬ್: ನಿಲ್ಲದ ಪ್ರತಿಭಟನೆ, 9 ಮಂದಿ ವಿರುದ್ಧ ಎಫ್‌ಐಆರ್

ಕೆಲವೆಡೆ ಆನ್‌ಲೈನ್‌ ತರಗತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 19:36 IST
Last Updated 17 ಫೆಬ್ರುವರಿ 2022, 19:36 IST
ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಓದುತ್ತಾ ಕುಳಿತ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು.
ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಓದುತ್ತಾ ಕುಳಿತ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು.   

ಬೆಂಗಳೂರು: ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶಕ್ಕೆ ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಂದ ಗುರುವಾರವೂ ಪ್ರತಿಭಟನೆ ನಡೆಯಿತು. ಕೆಲವು ಪದವಿಪೂರ್ವ ಕಾಲೇಜು, ಪ್ರೌಢಶಾಲೆಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ವಾಪಸಾದರು. ಕೆಲವೆಡೆ ವಿದ್ಯಾರ್ಥಿನಿಯರುಹಿಜಾಬ್‌ ತೆಗೆದು ತರಗತಿಗಳಿಗೆ ಹಾಜರಾಗಿದ್ದಾರೆ.

ಬೆಳಗಾವಿಯ ಸದಾಶಿವ ನಗರದ ವಿಜಯಾ ಅರೆವೈದ್ಯಕೀಯ ಸಂಸ್ಥೆಯ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡುವಂತೆ ವಿದ್ಯಾರ್ಥಿನಿಯರು ಪಟ್ಟುಹಿಡಿದರು. ಈ ವೇಳೆ ಹೊರಗಿನಿಂದ ಬಂದ ಕೆಲ ಯುವಕರು ‘ಅಲ್ಲಾಹು ಅಕ್ಬರ್‌’ ಘೋಷಣೆ ಕೂಗಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಆರು ಮಂದಿಯನ್ನುವಶಕ್ಕೆ ಪಡೆದಿದ್ದಾರೆ.

ಎಫ್‌ಐಆರ್: ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ 9 ಜನರ ವಿರುದ್ಧ ಶಿರಾಳಕೊಪ್ಪ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಪುರಸಭೆ ಸದಸ್ಯರಾದ ಮುದಾಸೀರ್, ಸಾದಿಕ್‌, ಶಿರಾಳಕೊಪ್ಪ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್ ಸೇರಿ 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಳ್ಳಾರಿ ನಗರದ ಸರಳಾದೇವಿ ಕಾಲೇಜಿನ ಬಳಿ ಹಿಜಾಬ್‌ ಧರಿಸಿಯೇ ಕಾಲೇಜಿನೊಳಕ್ಕೆ ಪ್ರವೇಶಿಸು
ವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಒಂದು ಹಂತದಲ್ಲಿ, ಪೊಲೀಸರ ವಿರುದ್ಧ ಪ್ರದರ್ಶನಕಾರರು ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ನೂಕಾಟ ನಡೆಯಿತು.
ಪೊಲೀಸರು ಸಂಯಮದಿಂದ ಪರಿಸ್ಥಿತಿ ನಿಭಾಯಿಸಿ, ಅಕ್ರೋಶಗೊಂಡ ವಿದ್ಯಾರ್ಥಿನಿಯರ ಮನವೊಲಿಸಿ ವಾಪಸ್‌ ಕಳುಹಿಸಿದರು.

ಹಾಸನ ನಗರದ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನ 20ಕ್ಕೂ ಹೆಚ್ಚು ಹಾಗೂ ಸರ್ಕಾರಿ ಪದವಿ ಪೂರ್ವ ವಿಭಜಿತ ಕಾಲೇಜಿನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ‘ಹಿಜಾಬ್‌ ನಮ್ಮ ಹಕ್ಕು, ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು.

ಶಿರಾಳಕೊಪ್ಪ, ಹೊನ್ನಾಳಿ, ಹೊಸಪೇಟೆ ನಗರದ ಕೆಎಸ್‌ಪಿಎಲ್‌ ಕಾಲೇಜು, ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜು, ಬನವಾಸಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು, ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಾಗೂ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಸುಮಾರು 15 ವಿದ್ಯಾರ್ಥಿನಿಯರುಪ್ರತಿಭಟಿಸಿದರು.

ಮುಳಬಾಗಿಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡದ ಕಾರಣ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದರು. ದೂರವಾಣಿ ಕರೆ ಮಾಡಿ ಪೋಷಕರಿಗೆ ವಿಷಯ ತಿಳಿಸಿದರು. ಪೋಷಕರು ಕಾಲೇಜು ಬಳಿ ಜಮಾಯಿಸಿದ್ದರು. ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ ಅವರು ಪೋಷಕರಿಗೆ ನ್ಯಾಯಾಲಯ ಆದೇಶ ಮನವರಿಕೆ ಮಾಡಿದರು. ತಹಶೀಲ್ದಾರ್ ಶೋಭಿತಾ, ಡಿವೈಎಸ್‌ಪಿ ಕೆ.ವಿ. ರೆಡ್ಡಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಹುಣಸೂರು ನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ 15,ಮೈಸೂರು ತಾಲ್ಲೂಕಿನ ಕೆ.ಆರ್.ಮಿಲ್‌ ಸರ್ಕಾರಿ ಪ್ರೌಢಶಾಲೆಯ ಇಬ್ಬರು ಹಾಗೂ ನಂಜನಗೂಡು ತಾಲ್ಲೂಕಿನ ಕವಲಂದೆಯ 31,ಅರಸೀಕೆರೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ 12 ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಗೌತಮ್ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ವಾಪಸಾದರು.

ಹೊಸದುರ್ಗದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 7, ದಾವಣಗೆರೆ ನಗರದ ಎವಿಕೆ ಮಹಿಳಾ ಕಾಲೇಜಿಗೆ ಹಿಜಾಬ್‌ ಹಾಕಿಕೊಂಡು ಬಂದಿದ್ದ 50ಕ್ಕೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶವಿಲ್ಲದ ಕಾರಣ ಮನೆಗೆ ಮರಳಿದರು.

ಗದಗ ಜಿಲ್ಲೆ ನರಗುಂದ ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮುಂಡಗೋಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 20 ವಿದ್ಯಾರ್ಥಿನಿಯರು ವಾಪಸ್‌ ತೆರಳಿದರು.

ಹಿಜಾಬ್ ತೆಗೆದು ತರಗತಿಗೆ ಹಾಜರು:
ಮದ್ದೂರಿನ ಕಮಲಾ ನೆಹರೂ ಬಾಲಿಕಾ ಪ್ರಾಢಶಾಲೆ ಎದುರು ವಾಗ್ವಾದ ನಡೆಸಿದ ಪೋಷಕರು, ನಂತರ ಹಿಜಾಬ್‌ ತೆಗೆಸಿ ಮಕ್ಕಳನ್ನು ಶಾಲೆಯೊಳಕ್ಕೆ ಕಳಿಸಿದರು. ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಇದೇ ಘಟನೆ ನಡೆಯಿತು. ಕೆಲವು ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ತರಗತಿಗೆ ತೆರಳಿದರು.

ಆನ್‌ಲೈನ್‌ ತರಗತಿ:
ಬೀದರ್‌ ಜಿಲ್ಲೆಯ ಹುಮನಾಬಾದ್‌, ಬಸವಕಲ್ಯಾಣ ಕೆಲ ಕಾಲೇಜ್‌ಗಳಲ್ಲಿ ಆನ್‌ಲೈನ್‌ ತರಗತಿಗೆ ಚಾಲನೆ ನೀಡಲಾಗಿದೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಫೆ. 19ರ ವರೆಗೆ ರಜೆ ಘೋಷಿಸಿ ಜಿಲ್ಲಾಧಿ
ಕಾರಿ ಕೆ.ರಾಕೇಶ್‌ ಕುಮಾರ್ ಆದೇಶಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ನಡೆಸುವಂತೆಯೂ ಸೂಚಿಸಿ
ದ್ದಾರೆ. ಹಿರಿಯೂರಿನಲ್ಲಿ ತೇರು ಮಲ್ಲೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಮೈಸೂರು ನಗರದ ರಾಜೀವ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ 14 ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ತರಗತಿಯನ್ನು ಆರಂಭಿಸಲಾಗಿದೆ.

ಹಿಜಾಬ್‌ಗೆ ಆಗ್ರಹಿಸಿ ಪ್ರತಿಭಟನೆ:
ಶಿವಮೊಗ್ಗ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿನಿಯರು ಗುರುವಾರವೂ ಪ್ರತಿ ಭಟನೆ ಮುಂದುವರಿಸಿದರು. ಕರ್ನಾಟಕ ಪಬ್ಲಿಕ್‌ ಶಾಲೆಯ ಪಿಯು, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಶಿಕ್ಷಕರು ವಿದ್ಯಾರ್ಥಿನಿಯರ ಮನವೊಲಿಸಿ ತರಗತಿಗೆ ಕರೆದುಕೊಂಡು ಹೋದರು.

ತಡಗಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಪಬ್ಲಿಕ್‌ ಶಾಲೆಯ ಪಿಯು ವಿದ್ಯಾರ್ಥಿನಿಯರು ಮಧ್ಯಾಹ್ನದವರೆಗೂ ಪ್ರತಿಭಟನೆ ಮುಂದುವರಿಸಿದರು.

ಹಿಜಾಬ್‌ ಹಾಕಿದವರಿಗೆ ಕಾಲೇಜಿನ ಒಳಗೆ ಪ್ರವೇಶ ನೀಡದ ಕಾರಣ ಶಿವಮೊಗ್ಗ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು, ನ್ಯಾಯಾಲಯದ ತೀರ್ಪು ಬರುವವರೆಗೂ ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಗಂಗಾವತಿಯ ಕೊಟ್ಟೂರು ವಿದ್ಯಾವರ್ಧಕ ಸಂಘದ ಜಿ.ಎಚ್.ಎನ್ ವಾಣಿಜ್ಯ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಕಳಚಲು ನಿರಾಕರಿಸಿ ಆಂತರಿಕ ಪರೀಕ್ಷೆ ಬರೆಯದೆ ವಾಪಸ್ ತೆರಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿ
ಭಟನೆ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮಧ್ಯೆ ಪ್ರವೇಶಿಸಬೇಕಾಯಿತು. ಉಡುಪಿಯ ಅಜ್ಜರ
ಕಾಡಿನ ಜಿ. ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರವೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರ್ಬಂಧಿಸಲಾಯಿತು.

ಸಿಪಿಐ ಎಚ್ಚರಿಕೆ:
ಗುರುಮಠಕಲ್‌ನ ಸರ್ಕಾರಿ ಕಿರಿಯ ಮಹಾವಿದ್ಯಾಲಯದ ಮುಂದೆ, ‘ಹಿಜಾಬ್ ಧರಿಸಿಯೇ ತರಗತಿಗೆ ಹೋಗುತ್ತೇವೆ. ನಮ್ಮ ಜೊತೆ ಅಲ್ಹಾಹ್ ಇದ್ದಾನೆ’ ಎಂದು ವಿದ್ಯಾರ್ಥಿನಿಯರು ಘೋಷಣೆ ಕೂಗಿದರು. ಸಿಪಿಐ ಖಾಜಾ ಹುಸೇನ್ ವಿರುದ್ಧ ಆಕ್ರೋಶಗೊಂಡ ಪೋಷಕರು, ‘ನಮ್ಮವರೇ ನಮಗೆ ಬೆಂಬಲ ಕೊಡುತ್ತಿಲ್ಲ’ ಎಂದು ಆರೋಪಿಸಿದರು. ‘ನಾನು ಒಬ್ಬ ಸರ್ಕಾರಿ ನೌಕರನಾಗಿದ್ದೇನೆ. ವೈಯಕ್ತಿಕವಾಗಿ ನಿಂದನೆ ಮಾಡಿದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ’ ಎಂದು ಸಿಪಿಐ ಎಚ್ಚರಿಸಿದರು.

ಓದುತ್ತಾ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು

ಚಿತ್ರದುರ್ಗ: ಹಿಜಾಬ್‌ ವಿವಾದ ಗುರುವಾರವೂ ಜಿಲ್ಲಾ ಕೇಂದ್ರದಲ್ಲಿ ತಾರಕಕ್ಕೇರಿತು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ತರಗತಿಗಳಿಂದ ಹೊರಗುಳಿದರು. ಗೇಟಿನ ಎದುರು ಓದುತ್ತಾ ಕುಳಿತುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು. ಅವರಿಗೆ ಪ್ರೌಢಶಾಲೆ
ವಿದ್ಯಾರ್ಥಿನಿಯರು ಜತೆಯಾದರು.

ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಹಿಜಾಬ್‌ ವಿವಾದ

ಶಿವಮೊಗ್ಗ: ನಗರದಲ್ಲಿ ಹಿಜಾಬ್ ವಿವಾದ ಹೊಸ ಸ್ವರೂಪ ಪಡೆದುಕೊಂಡಿದೆ. ಕಾಲೇಜು ಬದಲು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದೆ.

ಹಿಜಾಬ್‌ ಇಲ್ಲದೆ ಕಾಲೇಜಿನೊಳಗೆ ಪ್ರವೇಶ ನೀಡದ ಕಾರಣ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ನ್ಯಾಯಾಲಯದ ತೀರ್ಪು ಬರುವವರೆಗೂ ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕೆಲ ಕಾಲೇಜುಗಳಲ್ಲಿ ಹಿಜಾಬ್‌ ನಿರಾಕರಿಸಿದ್ದಕ್ಕೆ ಕಾಲೇಜು ಗೇಟಿನಿಂದ ಹೊರಗೆ ಬಂದ ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ಹರಿಹಾಯ್ದರು.

ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲೂ ಹಿಜಾಬ್‌ ನಿಷೇಧಿಸಿ ಆದೇಶ

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಸತಿ ಶಾಲೆ ಮತ್ತು ಕಾಲೇಜುಗಳು, ಮೌಲಾನಾ ಆಜಾದ್‌ ಮಾದರಿ ಶಾಲೆಗಳ ತರಗತಿ ಕೊಠಡಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ್‌, ಹಿಜಾಬ್‌ ಮತ್ತು ಇತರ ಧಾರ್ಮಿಕ ವಸ್ತ್ರ ಹಾಗೂ ಬಾವುಟಗಳನ್ನು ಧರಿಸುವುದನ್ನು ನಿಷೇಧಿಸಿ ಬುಧವಾರ ಸುತ್ತೋಲೆ ಹೊರಡಿಸಲಾಗಿದೆ.

ಹಿಜಾಬ್‌ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ತ್ರಿಸದಸ್ಯ ಪೀಠವು ಫೆಬ್ರುವರಿ 10ರಂದು ಹೊರಡಿಸಿರುವ ಮಧ್ಯಂತರ ಆದೇಶವನ್ನು ಆಧರಿಸಿ ಈ ಸುತ್ತೋಲೆ ಹೊರಡಿಸಲಾಗಿದೆ.

‘ಹೈಕೋರ್ಟ್‌ ಮಧ್ಯಂತರ ಆದೇಶವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆ ಮತ್ತು ಕಾಲೇಜುಗಳು ಹಾಗೂ ಮೌಲಾನಾ ಆಜಾದ್‌ ಮಾದರಿ ಶಾಲೆಗಳಿಗೂ ಅನ್ವಯವಾಗುತ್ತದೆ’ ಎಂದು ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.