ಬೆಳಗಾವಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿಗಳ ಹೆಸರಿನಲ್ಲಿ ತಿಗಣೆಯಂತೆ ಬಡವರ ರಕ್ತ ಹೀರುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆ ಸೋಲಿನ ಕೋಪವನ್ನು ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಈಗ ಬೆಲೆ ಏರಿಕೆ ಪರ್ವ ಶುರುವಾಗಿದೆ. ಸಿಮೆಂಟ್, ಕಬ್ಬಿಣ, ತರಕಾರಿ ಮಾತ್ರವಲ್ಲ, ಹಾಲಿನ ದರವನ್ನೂ ಹೆಚ್ಚಿಸಿದ್ದಾರೆ. ಕಳೆದ ವರ್ಷ ಪ್ರತಿ ಲೀಟರ್‌ಗೆ ₹3 ಹೆಚ್ಚಿಸಿದ್ದರು. ಈಗ ಮತ್ತೆ ಹೆಚ್ಚಿಸಲಾಗಿದೆ. ಬೆಳಿಗ್ಗೆ ಮಕ್ಕಳಿಗೆ ಹಾಲು ಕುಡಿಯಲು ಹೊರೆಯಾದರೆ, ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವ ಹಿರಿಯರಿಗೆ ಆಲ್ಕೋಹಾಲ್ ಕುಡಿಯಲು ಹೊರೆಯಾಗಿದೆ. ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಿಸಿ, ಕಾಫಿ, ಟೀ ಗ್ಲಾಸುಗಳಲ್ಲೂ ಕಲ್ಲು ಹಾಕಿದೆ’ ಎಂದು ದೂರಿದರು.
‘ಈ ಹಿಂದೆ ನಾವು ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದಾಗ, ನಿಮಗೆ ಮಾನ ಮರ್ಯಾದೆ ಇಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಈಗ ಅವರೇ ತೆರಿಗೆ ಹೆಚ್ಚಿಸಿದ್ದಾರೆ. ಸಿದ್ದರಾಮಯ್ಯ ನಿನಗೆ ಎಷ್ಟು ನಾಲಿಗೆ ಇದೆ’ ಎಂದು ಏಕವಚನದಲ್ಲೇ ಕಿಡಿ ಕಾರಿದರು.
‘ಇದನ್ನು ಖಂಡಿಸಿ ಜುಲೈ 3 ಅಥವಾ 4ರಂದು ಬೆಂಗಳೂರು ವಿಧಾನಸೌಧದಿಂದ ಮುಖ್ಯಮಂತ್ರಿ ಮನೆಯವರೆಗೆ ಮೆರವಣಿಗೆ ಮಾಡಲಾಗುವುದು. ಸಿದ್ದರಾಮಯ್ಯ ಹೊರಗೆ ಬರದಂತೆ ದಿಗ್ಬಂದನ ಹಾಕಲಾಗುವುದು’ ಎಂದರು.
‘ಈಗ ನಾಲ್ಕು ವಿಧಾನಸಭೆ ಚುನಾವಣೆ ನಡೆಯಲಿದೆ. ಆ ಚುನಾವಣೆಗೆ ಕಪ‍್ಪಕಾಣಿಕೆ ಕೊಡಲು ಮತ್ತು ಬಡವರನ್ನು ಸರ್ವನಾಶ ಮಾಡಲು ಕಾಂಗ್ರಸ್ ಸರ್ಕಾರ ಬೆಲೆಗಳ ಏರಿಕೆ ಮಾಡುತ್ತಿದೆ. ಜನರ ಶಾಪ ನಿಮಗೆ ತಟ್ಟಲಿದೆ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ’ ಎಂದು ಹರಿಹಾಯ್ದರು.
ಅಲಿಬಾಬಾ ಮತ್ತು 40 ಕಳ್ಳರು:
‘ಸರ್ಕಾರಿ ಬಸ್ ದರ ಹೆಚ್ಚಳಕ್ಕಾಗಿಯೂ ಈ ಸರ್ಕಾರ ತಯಾರಿ ನಡೆಸಿದೆ. ಇದಕ್ಕಾಗಿ ಅಧಿಕಾರಿಗಳಿಂದ ವರದಿ ಪಡೆದಿದೆ. ಇದು ಅಲಿಬಾಬಾ ಮತ್ತು 40 ಕಳ್ಳರ ಸರ್ಕಾರ’ ಎಂದು ವಾಗ್ದಾಳಿ ನಡೆಸಿದರು.
‘ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣ ಲೂಟಿ ಹೊಡೆದಿದ್ದಾರೆ. ಅವರ ಅಧಿಕಾರವಧಿಯಲ್ಲಿ ₹187 ಕೋಟಿಯ ಹಗರಣ ನಡೆದಿದೆ. ಇದಕ್ಕೆ ಏನು ಹೇಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಡಿ.ಕೆ.ಶಿವಕುಮಾರ್ ಕಳೆದ 20 ವರ್ಷಗಳಿಂದ ಚನ್ನಪಟ್ಟಣಕ್ಕೆ ಹೆಜ್ಜೆ ಇಟ್ಟಿಲ್ಲ. ಈಗ ವಿಧಾನಸಭೆ ಉಪಚುನಾವಣೆಗಾಗಿ ಹೋಗುತ್ತಿದ್ದಾರೆ. ಈ ಸಲದ ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಬಿಜೆಪಿಗೆ 20 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. ಡಿಕೆಶಿ ನಾಟಕಗಳನ್ನು ಚನ್ನಪಟ್ಟಣದ ಜನ ನೋಡಿದ್ದಾರೆ. ಹೀಗಿದ್ದರೂ ಚನ್ನಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಅಲ್ಲಿ ಡಿಕೆಶಿ ನಾಟಕ ನಡೆಯುವುದಿಲ್ಲ’ ಎಂದರು.
‘ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರೇ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಚರ್ಚೆ ಮುನ್ನಲೆಗೆ ತಂದಿದ್ದಾರೆ. ಈ ಹಿಂದೆ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದ್ದ ಸಿದ್ದರಾಮಯ್ಯ ಈಗ ಡಿ.ಕೆ.ಸುರೇಶ ಅವರನ್ನೂ ಸೋಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಒಳಜಗಳ ಇದ್ದೇ ಇದೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೆಲವರು ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಈ ಜಗಳದ ಮೂಲ ಸೂತ್ರಧಾರ ಸಿದ್ದರಾಮಯ್ಯ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.