ADVERTISEMENT

ಒಳ ಮೀಸಲಿಗೆ ಎಡಗೈ ಬಣ ಪಟ್ಟು, ಸಂಪುಟದಲ್ಲಿ ಚರ್ಚಿಸುವ ಭರವಸೆ ನೀಡಿದ ಮುಖ್ಯಮಂತ್ರಿ

ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಭರವಸೆ ನೀಡಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:19 IST
Last Updated 19 ಅಕ್ಟೋಬರ್ 2024, 15:19 IST
ಒಳ ಮೀಸಲಾತಿ ಜಾರಿ ಬೇಡಿಕೆ ಕುರಿತು ಪರಿಶಿಷ್ಟ ಎಡಗೈ ಸಮುದಾಯದ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದರು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇದ್ದರು
ಒಳ ಮೀಸಲಾತಿ ಜಾರಿ ಬೇಡಿಕೆ ಕುರಿತು ಪರಿಶಿಷ್ಟ ಎಡಗೈ ಸಮುದಾಯದ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದರು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇದ್ದರು   

ಬೆಂಗಳೂರು: ‘ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸದ್ಯ ಮಾತನಾಡುವುದಿಲ್ಲ. ಆದರೆ, ನಾನು ಒಳ ಮೀಸಲಾತಿ ಪರವಾಗಿದ್ದೇನೆ’ ಎಂದು ಪರಿಶಿಷ್ಟ ಎಡಗೈ ಸಮುದಾಯದ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಒಳ ಮೀಸಲಾತಿ ಬೇಡಿಕೆ ಕುರಿತು ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಎಡಗೈ ಸಮುದಾಯದ ಮುಖಂಡರ ಜೊತೆ ಮುಖ್ಯಮಂತ್ರಿ ಶನಿವಾರ ಚರ್ಚೆ ನಡೆಸಿದರು. ಸಚಿವರಾದ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಮಾಜಿ ಸಚಿವರಾದ ಎಚ್. ಆಂಜನೇಯ, ಶಿವಣ್ಣ, ವಿಧಾನ‌ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಶಾಸಕ ಬಸಂತಪ್ಪ ಇದ್ದರು. 

ಸಭೆಯ ಬಳಿಕ ಮಾತನಾಡಿದ ಮುನಿಯಪ್ಪ, ‘ಒಳ ಮೀಸಲಾತಿ ಜಾರಿ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಯಾವುದೇ ನೇಮಕಾತಿಗಳನ್ನು ಮಾಡದಂತೆ ನಾವು ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ’ ಎಂದರು.

ADVERTISEMENT

‘ಸುಪ್ರೀಂ ಕೋರ್ಟ್​ ತೀರ್ಪಿನಂತೆ, ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಮ್ಮ ಸಮುದಾಯದ ಎಲ್ಲ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇವೆ’ ಎಂದರು.

‘ನಮ್ಮ ಬೇಡಿಕೆ ವಿಚಾರದಲ್ಲಿ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಳ್ಳಬೇಕು. ಅದಕ್ಕೆ ಸಹಮತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋಣ ಎಂದಿದ್ದಾರೆ. ಜಾತಿ ಜನಗಣತಿ ವರದಿಯನ್ನೂ ಸಚಿವ ಸಂಪುಟ ಸಭೆಯ ಮುಂದಿಟ್ಟು ಒಪ್ಪಿಗೆ ಪಡೆಯಬೇಕು. ಈ ವಿಷಯಕ್ಕೆ ಎಲ್ಲರ ವಿಶ್ವಾಸ ಗಳಿಸಬೇಕು. ಯಾವುದೇ ಸಮುದಾಯದ ವಿರೋಧ ಇಲ್ಲ’ ಎಂದರು.

ಎಚ್. ಆಂಜನೇಯ ಮಾತನಾಡಿ, ‘ಮಾದಿಗ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ. ನಮ್ಮದು ಸಫಾಯಿ‌ ಕರ್ಮಚಾರಿ ಉದ್ಯೋಗ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನಾವು ಹಿಂದುಳಿದಿದ್ದೇವೆ. ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬಹುದೆಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಒಳ ಮೀಸಲಾತಿಗಾಗಿ 30 ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನ್ಯಾಯ ಕೊಡಿಸಲು ನ್ಯಾಯಮೂರ್ತಿ ಎ.ಜಿ. ಸದಾಶಿವ ಆಯೋಗವನ್ನು ಸರ್ಕಾರ ರಚಿಸಿತ್ತು. ನೀತಿ ಸಂಹಿತೆ ನೋಡಿ ಮುಂದುವರೆಯುತ್ತೇವೆ ಎಂದು ಮುಖ್ಯಮಂತ್ರಿ ನಮಗೆ ಭರವಸೆ ನೀಡಿದ್ದಾರೆ. ಏನು ಮಾಡುತ್ತಾರೆಂದು ನೋಡೋಣ’ ಎಂದರು.

ಒಳ ಮೀಸಲಾತಿ ವಿಷಯದ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಹೈಕಮಾಂಡ್ ಒಪ್ಪಿಗೆ ಪಡೆದು ಜಾರಿಗೊಳಿಸಲು ಬದ್ಧ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕೆ.ಎಚ್‌. ಮುನಿಯಪ್ಪ  ಸಚಿವ
ನಾವು ಹಸಿವಿನಿಂದ ಸಾಯುತ್ತಿದ್ದೇವೆ. ಹೊಟ್ಟೆ ಹಸಿದಿರುವ ನಾವು ಒಳ ಮೀಸಲಾತಿ ಕೇಳುತ್ತಿದ್ದೇವೆ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಮೌನ ವಹಿಸಿದರೆ ಒಪ್ಪಿಗೆಯಿದೆ ಎಂದರ್ಥ
ಎಚ್‌. ಆಂಜನೇಯ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.