ಬೆಂಗಳೂರು: ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆಯ ಹೊತ್ತಿಗೆ ಮತ ಗಿಟ್ಟಿಸಲು ಬಳಕೆಯಾಗುವ ಕೃಷಿ, ನೀರಾವರಿ ಯೋಜನೆಗಳು ಮತದಾನ ಮುಗಿಯುತ್ತಿದ್ದಂತೆನೇಪಥ್ಯಕ್ಕೆ ಸರಿಯುತ್ತವೆ. ಅಧಿಕಾರ ಹಿಡಿಯುತ್ತಿದ್ದಂತೆ ಹಿಂದೆ ನೀಡಿದ್ದ ವಾಗ್ದಾನ, ಭರವಸೆಗಳನ್ನೆಲ್ಲ ರಾಜಕಾರಣಿಗಳು ಅದೇ ನೀರಿನಲ್ಲಿ ತೊಳೆದುಬಿಡುತ್ತಾರೆ. ಮತ್ತೊಂದು ಚುನಾವಣೆಯ ಕಸರತ್ತು ಶುರುವಾಗು ವವರೆಗೆ ‘ದಿವ್ಯಾಸ್ತ್ರ’ವನ್ನು ಜೋಪಾನಮಾಡಿ ಇಟ್ಟುಕೊಳ್ಳುವುದು ರಾಜಕಾರಣಿಗಳ ಜಾಯಮಾನ.
ಅಧಿಕಾರಸ್ಥರನ್ನು ಇಳಿಸಿ, ಅಧಿಕಾ ರದ ಪೀಠ ಏರಲೂ ಎಲ್ಲ ಪಕ್ಷಗಳಿಗೂ ರೈತ, ಕೃಷಿ, ನೀರಾವರಿಯ ಮೆಟ್ಟಿಲುಗಳಿರುವ ಏಣಿಯೇ ಬೇಕು. ಅದರಲ್ಲೂ ಕೃಷ್ಣಾ ಮತ್ತು ಕಾವೇರಿ ನದಿ ನೀರಿನ ವಿಚಾರ ಕಿತ್ತೂರು ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ 90 ರದಶಕದಿಂದಲೂ ಪ್ರತಿಯೊಂದು ಚುನಾವಣೆಯ ಮುಖ್ಯ ವಿಷಯ. ಯೋಜನಾ ವೆಚ್ಚದ ಹೆಚ್ಚಳ, ಜಲ ವಿವಾದ, ಅನುಮತಿಯಲ್ಲಿ ವಿಳಂಬ, ಭೂಸ್ವಾದೀನದ ತೊಡಕು ಮತ್ತು ಹಣ
ಕಾಸಿನ ಮುಗ್ಗಟ್ಟಿನಿಂದಾಗಿ ನೀರಾವರಿ ಯೋಜನೆಗಳು ತೆವಳುತ್ತಾ ಸಾಗುತ್ತಿ ರುವುದು ಮಾತ್ರ ವಾಸ್ತವ.
2010 ರಲ್ಲಿ ಕೃಷ್ಣಾ ನದಿ ನೀರಿನ ಹಂಚಿಕೆಯೆ ತೀರ್ಪು ಬಂದಾಗ, ಮುಂದಿನ ದಶಕವನ್ನು ನೀರಾವರಿ ದಶಕ ಎಂದು ಘೋಷಿಸಿ ಪೂರ್ಣಗೊಳಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. 2013 ರ ವಿಧಾನಸಭಾ ಚುನಾವಣೆಗೆ ಮುನ್ನ ಉತ್ತರ ಕರ್ನಾಟ ಕದ ಮತದಾರರನ್ನು ಸೆಳೆಯಲು ‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ’ ಎಂಬ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ₹10 ಸಾವಿರ ಕೋಟಿಯಂತೆ ಒಟ್ಟು ₹50 ಸಾವಿರ ಕೋಟಿ ಖರ್ಚು ಮಾಡುವುದಾಗಿ ವಾಗ್ದಾನ ಮಾಡಿದ್ದರು.
ಕಳೆದ ಚುನಾವಣೆ ಹೊತ್ತಿಗೆ ಮಹದಾಯಿ ಯೋಜನೆ ಪ್ರಮುಖ ವಿಷಯವಾಗಿತ್ತು. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವರು, ರಾಜ್ಯ ನಾಯಕರು ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಘೋಷಿಸಿದ್ದರು. ಅಂದು ಶಾಸಕರಾಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ವೇದಿಕೆಯಲ್ಲಿಯೇ ಇದ್ದರು. ಆದರೆ, ಲೋಕಸಭೆ ಚುನಾವಣೆ ಮುಗಿದು ಮೂರು ವರ್ಷ ಸಮೀಸುತ್ತಿದ್ದರೂ ಡಬಲ್ ಎಂಜಿನ್ ಸರ್ಕಾರ, ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲೇ ಇಲ್ಲ.
ಇದೀಗ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಆರಂಭಿಸಿದ್ದು, ಕೋವಿಡ್‌ನಿಂದಾಗಿ ಮೊಟಕುಗೊಂಡಿದೆ.
ಯಾವುದೇ ಯೋಜನೆಗಳನ್ನು ಪೂರ್ಣಗೊಳಿಸುವುದು ಭಾರಿ ಸಂಖ್ಯೆ ಯಲ್ಲಿ ಜನ ಸೇರಿಸಿ ಹೋರಾಟ ಅಥವಾ ಪಾದಯಾತ್ರೆ ಮಾಡಿದಷ್ಟು ಸುಲಭವಲ್ಲ. ಕೇಂದ್ರ ಅರಣ್ಯ–ಪರಿಸರ ಸಚಿವಾಲಯದ ಅನುಮತಿ ಪಡೆಯದೇ, ಅಂತರರಾಜ್ಯ ಜಲ ವಿವಾದದ ವ್ಯಾಪ್ತಿಗೆ ಒಳಪಡುವ ನದಿ ನೀರಿನ ವಿಷಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಚುನಾವಣೆಯಲ್ಲಿ ಮತಗಳಿಸಲು ಅಥವಾ ಜನಪ್ರಿಯತೆ ಪಡೆಯಲು ತರಾತುರಿಯಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇ ಯೋಜನೆ ವಿಳಂಬಕ್ಕೆ ಪ್ರಮುಖ ಕಾರಣ.
ಆರಂಭಿಕ ಹಂತದಲ್ಲೇ ಎಚ್ಚರಿಕೆ ವಹಿಸದೇ ಭಾರಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ
ದ್ದರಿಂದಾಗಿ ಇವು ಬೊಕ್ಕಸಕ್ಕೆ ಹೊರೆಯಾಗಿವೆ. ದಶಕಗಳ ವಿಳಂಬವಾಗಿದ್ದರಿಂದಾಗಿ, ಚಾಲ್ತಿಯಲ್ಲಿರುವ, ಅನುಮತಿ ಸಿಕ್ಕಿರುವ ಹಾಗೂ ಸಿಗಬೇಕಾಗಿರುವ ಹೊಸ ಯೋಜನೆಗಳು ಸೇರಿ ಎಲ್ಲಾ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲು ಸುಮಾರು ₹2.50 ಲಕ್ಷ ಕೋಟಿಯ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ ಕಳೆದ 10 ವರ್ಷಗಳಲ್ಲಿ ರಾಜ್ಯ ಸರ್ಕಾರ ವಿವಿಧ ನೀರಾವರಿ ಯೋಜನೆಗಳ ಮೇಲೆ ಮಾಡಿರುವ ವೆಚ್ಚ ₹87 ಸಾವಿರ ಕೋಟಿ. ಇದರಿಂದ 4.47 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿದೆ.
ಅಲ್ಲದೇ, ಚಾಲ್ತಿಯಲ್ಲಿರುವ 245 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ₹1.12 ಲಕ್ಷ ಕೋಟಿ ಬೇಕಾಗಬಹುದು. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519 ಅಡಿಗಳಿಂದ 524 ಅಡಿಗಳಿಗೆ ಎತ್ತರಿಸುವುದರಿಂದ 20 ಗ್ರಾಮಗಳ ಮುಳುಗಡೆ ಆಗುತ್ತವೆ. ಅಷ್ಟೂ ಗ್ರಾಮಗಳ ಸ್ಥಳಾಂತರ, ಪುನರ್‌ವಸತಿಗೆ ₹50 ಸಾವಿರ ಕೋಟಿ ಬೇಕಾಗುತ್ತದೆ. ಈ ವ್ಯಾಪ್ತಿಗೆ ಬರುವ ಏತ ನೀರಾವರಿ, ಕೆರೆ ತುಂಬಿಸುವ ಯೋಜನೆಗಳಿಗಾಗಿ ₹15 ಸಾವಿರ ಕೋಟಿ ಬೇಕಾಗುತ್ತದೆ ಎನ್ನುತ್ತಾರೆ ಜಲ ಸಂಪನ್ಮೂಲ ಇಲಾಖೆಅಧಿಕಾರಿಗಳು.
ನಿರ್ಮಾಣ ಸಾಮಗ್ರಿಗಳ ದರ ವಾರ್ಷಿಕ ಸರಾಸರಿ ಶೇ 8 ರಿಂದ ಶೇ 10 ರಷ್ಟು ಏರಿಕೆ ಆಗುತ್ತದೆ. ಭೂಸ್ವಾಧೀನವೂ ಅಷ್ಟು ಸುಲಭದ ಕೆಲಸವಲ್ಲ. ಪರಿಹಾರಕ್ಕೂ ಭಾರಿ ಪ್ರಮಾಣದ ಮೊತ್ತ ಬೇಕಾಗುತ್ತದೆ. ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಐದು ವರ್ಷಗಳವರೆಗೆ ಪ್ರತಿವರ್ಷಕ್ಕೆ ₹25,000 ಕೋಟಿಯಂತೆ ಅನುದಾನ ನೀಡಬೇಕಾಗುತ್ತದೆ ಎನ್ನುತ್ತಾರೆ ಅವರು.
ನೀರಾವರಿ ಯೋಜನೆಗಳ ಅಂದಾಜು ವೆಚ್ಚ ಪರಿಷ್ಕರಣೆ ಮಾಡುವುದು ಹೊಸತೇನಲ್ಲ. ಅತ್ಯಂತ ಹಳೆಯ ನೀರಾವರಿ ಯೋಜನೆಗಳಲ್ಲಿ ಒಂದಾಗ ಹೇಮಾವತಿಯನ್ನು 1967 ರಲ್ಲಿ ಆರಂಭಿಸಲಾಯಿತು. ಆಗ ಅದರ ಮೂಲ ಅಂದಾಜು ₹16.30 ಕೋಟಿ ಇತ್ತು. ಯೋಜನೆ ಪೂರ್ಣಗೊಂಡಾಗ ₹3,877 ಕೋಟಿಗೆ ಏರಿತ್ತು. ಆದರೆ, ಗುಣಮಟ್ಟದ ಕಾಮಗಾರಿ, ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವುದೂ ಸವಾಲಿನದಾಗಿದೆ. ರಾಜ್ಯದಲ್ಲಿ ಉದ್ದೇಶಿತ 40.66 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 29.19 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿದೆ. ಕೃಷ್ಣಾ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ಎರಡನೇ ನ್ಯಾಯಮಂಡಳಿ ನೀಡಿದ ನೀರಿನ ಅಂತಿಮ ಹಂಚಿಕೆ ಕುರಿತ ಆದೇಶದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ತಕ್ಷಣವೇ ಹೊರಡಿಸಿದರೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸಲು ಸಾಧ್ಯ. ಇದರಿಂದ 130 ಟಿಎಂಸಿ ಅಡಿ ನೀರಿನ ಬಳಕೆ ಮಾಡಿ 5.3 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು. ಈ ಯೋಜನೆಗಾಗಿ ಈವರೆಗೆ ರಾಜ್ಯ ಸರ್ಕಾರ ₹12,431.66 ಕೋಟಿ ವೆಚ್ಚ ಮಾಡಿದೆ.
ಇಷ್ಟೆಲ್ಲಾ ಖರ್ಚು ಮಾಡಿದ ಮೇಲೂ ಉಪನಾಲೆಗಳ ಕೊನೆಯಲ್ಲಿರುವ ರೈತನ ಜಮೀನಿಗೆ ನೀರು ಸಿಗುವ ಖಾತರಿ ಇಲ್ಲ. ಅನೇಕ ಯೋಜನೆಗಳು ಮುಗಿದು ಎರಡು ದಶಕಗಳು ಕಳೆದರೂ ಉಪನಾಲೆಯ ಅಂತ್ಯದವರೆಗೂ ನೀರೇ ತಲುಪಿಲ್ಲ. ನಾಲೆಗಳ ಆರಂಭಿಕ ಹಂತದ ರೈತರಿಗೆ ನೀರಿನ ಸಿಂಹಪಾಲು ಸಿಕ್ಕಿರುವುದು ನೀರಾವರಿ ಯೋಜನೆಗಳನ್ನು ಪರಾಮರ್ಶಿಸಿದರೆ ಸ್ಪಷ್ಟವಾಗುತ್ತದೆ. ನೀರಾವರಿ ಶ್ರೀಮಂತ ಜಿಲ್ಲೆಗಳಲ್ಲಿ ನೆರೆಯ ರಾಜ್ಯಗಳ ಕೆಲವು ವ್ಯಕ್ತಿಗಳು ಭೂಮಿ ಗುತ್ತಿಗೆ ಪಡೆದು ಬೆಳೆಯನ್ನು ಬೆಳೆದು, ನೀರಾವರಿಯ ಲಾಭ ಪಡೆಯುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ.
ಜಲ ವಿವಾದ, ಅನುಮತಿ ಸಿಗದೇ ಯೋಜನೆಗಳಿಗೆ ಹಿನ್ನಡೆ: ಕಾರಜೋಳ
ನೀರಾವರಿ ಯೋಜನೆಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಗದೇ ಇರುವುದು, ಅಂತರ ರಾಜ್ಯ ಜಲ ವಿವಾದಗಳಿಂದ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ವೆಚ್ಚ ಹಲವು ಪಟ್ಟು ಹೆಚ್ಚಾಗಿ ಕುಂಟುತ್ತಾ ಸಾಗಿವೆ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ.
ಅನುಮೋದನೆ ಪಡೆದ ಮೂಲ ಯೋಜನೆಗೆ ತಕ್ಕಂತೆ ಕಾರ್ಯಗತಗೊಳಿಸಿದರೆ, ನೀರಾವರಿ ನಾಲೆಗಳ ಕಟ್ಟ ಕಡೆಯ ರೈತನಿಗೂ ನೀರು ಸಿಗುತ್ತದೆ. ಆದರೆ ಪ್ರಭಾವಿಗಳು ಮತ್ತು ಕೆಲವು ರಾಜಕಾರಣಿಗಳು ಕೊನೆಯ ಹಂತದಲ್ಲಿ ತಮಗೆ ಬೇಕಾದಂತೆ ಪ್ರದೇಶಗಳನ್ನು ಸೇರಿಸುತ್ತಾ ಹೋದ ಪರಿಣಾಮ, ನೀರಾವರಿಗೆ ಒಳಪಡಿಸುವ ಪ್ರದೇಶ ಹಿಗ್ಗುತ್ತಾ ಹೋಗಿ ಕೊನೆಯ ಹಂತದ ರೈತರಿಗೆ ನೀರು ಸಿಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಅವರು.
ನೀರಾವರಿ ಪ್ರದೇಶಗಳಲ್ಲಿ ನಾಲೆಗಳ ನಿರ್ವಹಣೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ನೀರು ಬಳಕೆದಾರರ ಸಹಕಾರ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಿಂದೆ ನೀರುಗಂಟಿಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಇದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದ್ದರು. ರೈತರಿಂದ ಸಾಂಕೇತಿಕವಾಗಿ ಶುಲ್ಕಪಡೆದು ನಿರ್ವಹಣೆ ಸರಿಯಾಗಿ ಮಾಡುತ್ತಿದ್ದರು. ಈಗ ಆ ವ್ಯವಸ್ಥೆಯೇ ಹಳಿ ತಪ್ಪಿದೆ ಎಂದು ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.