ADVERTISEMENT

ನಿಲ್ಲದ ಪರಿಶಿಷ್ಟರ ಮೇಲಿನ ದೌರ್ಜನ್ಯ: ಶೇ 13ರಷ್ಟು ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 0:30 IST
Last Updated 16 ಜುಲೈ 2023, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ಕಳೆದ ಆರು ತಿಂಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ನಡೆದಿವೆ. ಐದು ವರ್ಷಗಳ ಅವಧಿಯಲ್ಲಿ ಪ್ರತಿವರ್ಷ ಸರಾಸರಿ ಎರಡು ಸಾವಿರ ಪ್ರಕರಣಗಳು ದಾಖಲಾಗಿವೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಡಿ.ತಿಮ್ಮಯ್ಯ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ ಉತ್ತರ ನೀಡಿದ್ದು, ದೌರ್ಜನ್ಯ ಪ್ರಕರಣಗಳ ತಡೆಗೆ ತಮ್ಮ ಸರ್ಕಾರ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 234 ಪ್ರಕರಣಗಳು ನಡೆದಿವೆ. ಎರಡನೇ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆ (115) ಹಾಗೂ ಮೂರನೇ ಸ್ಥಾನದಲ್ಲಿ ತುಮಕೂರು (103) ಇದೆ. ರಾಜ್ಯದ ಕೆಜಿಎಫ್‌ (17) ಹಾಗೂ ಮಂಗಳೂರಿನಲ್ಲಿ (19) ಅತ್ಯಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. 

ADVERTISEMENT

ಶೇ 13ರಷ್ಟು ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್: 2019ರಿಂದ ಇಲ್ಲಿಯವರೆಗೆ 9,130 ಪ್ರಕರಣಗಳು ದಾಖಲಾದರೆ, 1,195 ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್‌ ಹಾಕಲಾಗಿದೆ. ಉಳಿದ ಪ್ರಕರಣಗಳಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 

ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿದಾರರಿಗೆ ಸರಿಯಾದ ಸಮಯಕ್ಕೆ ಪ್ರಯಾಣ ಭತ್ಯೆ, ವಿಶೇಷ ಭತ್ಯೆ ನೀಡದ ಕಾರಣ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಹಲವು ಪ್ರಕರಣಗಳಲ್ಲಿ ಹಿನ್ನಡೆಯಾಗಿದೆ ಎಂಬದು ಸರಿಯಲ್ಲ. ಅಂತಹ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಸಂತ್ರಸ್ತರು, ಅವರ ಅವಲಂಬಿತರು, ಸಾಕ್ಷಿದಾರರು ಮತ್ತು ಸಹಾಯಕರಿಗೆ ಪ್ರಯಾಣ ಭತ್ಯೆ, ಆಹಾರ ಭತ್ಯೆ, ವೈದ್ಯಕೀಯ ಹಾಗೂ ದಿನ ಭತ್ಯೆಗಳನ್ನು ನೀಡಲಾಗುತ್ತಿದೆ ಎಂದು ಗೃಹ ಸಚಿವರು ವಿವರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.