ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಮೇಲಿನ ಚರ್ಚೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರವೂ ಮುಂದುವರಿದು, ಆಡಳಿತ, ವಿರೋಧ ಪಕ್ಷಗಳ ನಡುವೆ ವಾದ–ಪ್ರತಿವಾದ ತಾರಕ್ಕೇರಿದ ಕಾರಣ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಬಿಜೆಪಿಯ ಎನ್.ರವಿಕುಮಾರ್ ಮಂಡಿಸಿದ ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್‌ನ ನಾಗರಾಜ್ ಯಾದವ್ ಮಾತನಾಡಿ, ಹಣಕಾಸು ಇಲಾಖೆ ಮುಖ್ಯಮಂತ್ರಿ ಬಳಿ ಇದೆ ಎಂದಾಕ್ಷಣ ವಿರೋಧ ಪಕ್ಷಗಳು ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವುದು ಸರಿಯಲ್ಲ, ಹಗರಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಪಾತ್ರವಿದೆ. ಹಾಗಂತ ನಾವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೇಳುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು.
ಈ ಮಾತಿಗೆ ಕೆರಳಿದ ಬಿಜೆಪಿ–ಜೆಡಿಎಸ್ ಸದಸ್ಯರು ನಾಗರಾಜ್ ಯಾದವ್ ಮಾತಿಗೆ ಅಡ್ಡಿಪಡಿಸಿದರು. ಆಗ ಬುದ್ಧಿಮಾತು ಹೇಳಿದ ಉಪ ಸಭಾಪತಿ ಪ್ರಾಣೇಶ್ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಸದಸ್ಯರು, ‘ಪೀಠದಲ್ಲಿದ್ದವರು ಪಕ್ಷಪಾತ ಮಾಡಬಾರದು, ವಿರೋಧ ಪಕ್ಷಗಳಿಗೆ ಹೆಚ್ಚು ಸಮಯ, ಆಡಳಿತ ಪಕ್ಷಕ್ಕೆ ಕಡಿಮೆ ಸಮಯ ಮಾತನಾಡಲು ನೀಡುತ್ತಿದ್ದೀರಿ. ಅಲ್ಲದೇ, ಹಿಂದೆ ಬಿಜೆಪಿ ಆಡಳಿತ ಪಕ್ಷದಲ್ಲಿ ಇದ್ದಾಗ ಮೂರು ಪಕ್ಷಗಳ ಸದಸ್ಯರಿಗೆ ಸಮಾನ ಅವಕಾಶ ನೀಡಲಾಗುತ್ತಿತ್ತು. ಈಗ ಹಾಗಿಲ್ಲ’ ಎಂದು ಟೀಕಿಸಿದರು.
ಬಿಜೆಪಿಯ ಎನ್. ರವಿಕುಮಾರ್ ಮಾತನಾಡಿ, ಹಗರಣದ ₹20 ಕೋಟಿ ತೆಲಂಗಾಣ, ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಎಂದರು. ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಕಾಂಗ್ರೆಸ್ ಸದಸ್ಯರು ಆಧಾರವಿಲ್ಲದ ಆರೋಪಗಳನ್ನು ಕಡತದಿಂದ ತೆಗೆಸುವಂತೆ ಪಟ್ಟು ಹಿಡಿದರು. ಮಾತಿಗೆ ಮಾತು ಬೆಳೆದು ಗದ್ದಲದ ವಾತಾವರಣ ನಿರ್ಮಾಣವಾಯಿತು. ಕಲಾಪ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.