ADVERTISEMENT

ಲಾಕ್‌ಡೌನ್‌ ಸಡಿಲ: ಹೊರ ಬಂದ ಜನ, ಮಳಿಗೆಗಳಲ್ಲಿ ಖರೀದಿ ಉತ್ಸಾಹ

ಎಲ್ಲ ಕಡೆ ವಾಹನ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 20:33 IST
Last Updated 21 ಜೂನ್ 2021, 20:33 IST
ಲಾಕ್‌ಡೌನ್‌ ಸಡಿಲಿಕೆ ಮಾಡಿದ ಕಾರಣ ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಸೋಮವಾರ ಜನದಟ್ಟಣೆ ಕಂಡುಬಂತುಪ್ರಜಾವಾಣಿ ಚಿತ್ರ/ ಜನಾರ್ದನ್‌ ಬಿ.ಕೆ.
ಲಾಕ್‌ಡೌನ್‌ ಸಡಿಲಿಕೆ ಮಾಡಿದ ಕಾರಣ ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಸೋಮವಾರ ಜನದಟ್ಟಣೆ ಕಂಡುಬಂತುಪ್ರಜಾವಾಣಿ ಚಿತ್ರ/ ಜನಾರ್ದನ್‌ ಬಿ.ಕೆ.   

ಬೆಂಗಳೂರು: ಎರಡನೇ ಹಂತದ ಲಾಕ್‌ಡೌನ್‌ ಸಡಿಲಿಕೆ ಸೋಮವಾರದಿಂದ ಜಾರಿಯಾದ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಪ್ರವಾಹದೋಪಾದಿಯಲ್ಲಿ ರಸ್ತೆಗಿಳಿದರು.

ಕೆಲವು ನಗರಗಳಲ್ಲಿ ಬಸ್‌ ನಿಲ್ದಾಣಗಳು, ಮಾರುಕಟ್ಟೆಗಳು ಮಾತ್ರವಲ್ಲದೆ, ಬಟ್ಟೆ ಅಂಗಡಿ, ಚಿನ್ನಾಭರಣ ಮಳಿಗೆಗಳಲ್ಲೂ ಭಾರಿ ಪ್ರಮಾಣದ ಜನಸಂದಣಿ ಎದ್ದು ಕಾಣಿಸುತ್ತಿತ್ತು.

ಕೊರೊನಾ ಹೋಗಿಯೇ ಬಿಟ್ಟಿತು, ಇನ್ನೇನು ಭಯಪಟ್ಟು ಮನೆಯೊಳಗೆ ಬಚ್ಚಿಟ್ಟುಕೊಳ್ಳುವ ಪರಿಸ್ಥಿತಿ ಮುಗಿದು ಹೋಯಿತು ಎಂಬ ಉತ್ಸಾಹ ಮಾರುಕಟ್ಟೆಯಲ್ಲಿ ಕೂಡಿದ್ದ ಜನಜಂಗುಳಿಯಲ್ಲಿ ಕಂಡು ಬಂದಿತು. ಅಂಗಡಿಗಳ ಬಾಗಿಲು ತೆರೆದಿದ್ದನ್ನು ಕಂಡ ಜನ ಖರೀದಿಗೆ ಮುಗಿಬಿದ್ದ ದೃಶ್ಯ ಬಹುತೇಕ ಕಡೆ ಸಾಮಾನ್ಯವಾಗಿತ್ತು.

ADVERTISEMENT

ಬಿಬಿಎಂಪಿ ವ್ಯಾಪ್ತಿ ಸೇರಿದಂತೆ 17 ಜಿಲ್ಲೆಗಳಲ್ಲಿ ಸೋಮವಾರ ಬೆಳಿಗ್ಗೆಯಿಂದ ಹಗಲಿನ ವೇಳೆಯಲ್ಲಿ ಲಾಕ್‌ಡೌನ್‌ ಬಹುತೇಕ ತೆರವಾಗಿದೆ. 13 ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಬಳಸಿಕೊಂಡ ಜನರು ನಗರ, ಪಟ್ಟಣ, ಪೇಟೆಗಳತ್ತ ಮುಖ ಮಾಡಿದ್ದು, ಮೊದಲ ದಿನವೇ ಹಲವು ಕಡೆಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸರು, ಇತರ ಇಲಾಖೆಗಳ ಅಧಿಕಾರಿಗಳು ಅಕ್ಷರಶಃ ಪರದಾಡಿದರು.

ಮೈಸೂರು ಜಿಲ್ಲೆಯಲ್ಲಿ ಮಾತ್ರ ಕಠಿಣ ನಿರ್ಬಂಧಗಳು ಜಾರಿಯಲ್ಲಿವೆ. ಮೈಸೂರು, ದಕ್ಷಿಣ ಕನ್ನಡ ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಲ್ಲೂ ಬಸ್‌, ಆಟೊ ಮತ್ತು ಟ್ಯಾಕ್ಸಿಗಳ ಸಂಚಾರ ಆರಂಭವಾಗಿದೆ. ಹಗಲಿನ ವೇಳೆ ಲಾಕ್‌ಡೌನ್‌ ತೆರವಾಗಿರುವ 17 ಜಿಲ್ಲೆಗಳಲ್ಲಿ ಜನರು ದಿನವಿಡೀ ಓಡಾಟದಲ್ಲೇ ಮಗ್ನರಾಗಿದ್ದ ದೃಶ್ಯಗಳು ಕಂಡುಬಂದವು.

ಸಂಚಾರ ದಟ್ಟಣೆಯ ಬಿಸಿ: ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಬೆಳಿಗ್ಗೆಯೇ ನೂರಾರು ವಾಹನಗಳು ರಸ್ತೆಗಿಳಿದಿದ್ದವು. ರಾಜಧಾನಿಯ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ವಿಧಾನಸೌಧ ಸುತ್ತಲಿನ ರಸ್ತೆಗಳು, ಜೆ.ಸಿ. ರಸ್ತೆ, ವರ್ತುಲ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗಳಲ್ಲಿ ಮಧ್ಯಾಹ್ನದವರೆಗೂ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೇ ಅತಿಯಾದ ಜನದಟ್ಟಣೆ ಇತ್ತು. ಸಾವಿರಾರು ಮಂದಿ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಪರದಾಡಿದರು. ಬಸ್‌ಗಳ ಎಲ್ಲ ಆಸನಗಳನ್ನೂ ಪ್ರಯಾಣಿಕರು ಆಕ್ರಮಿಸಿಕೊಂಡಿದ್ದರು. ಅವರ ಮನವೊಲಿಸಿ ಕೆಳಕ್ಕೆ ಇಳಿಸಲು ಬಿಎಂಟಿಸಿ ಸಿಬ್ಬಂದಿ, ಅಧಿಕಾರಿಗಳು ಮತ್ತು ಪೊಲೀಸರು ಅಂಗಲಾಚುತ್ತಿದ್ದ ದೃಶ್ಯಗಳು ಕಣ್ಣಿಗೆ ಬಿದ್ದವು.

ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳು 30 ಜಿಲ್ಲೆಗಳಲ್ಲಿ 5,000ಕ್ಕೂ ಹೆಚ್ಚು ಟ್ರಿಪ್‌ ಸಂಚಾರ ನಡೆಸಿವೆ. ಹಲವು ನಗರಗಳಲ್ಲಿ ನಗರ ಸಾರಿಗೆ ಬಸ್‌ಗಳ ಸಂಚಾರ ಆರಂಭವಾಗಿದೆ. ರಾಜಧಾನಿಯಲ್ಲಿ ‘ನಮ್ಮ ಮೆಟ್ರೊ ರೈಲು’ ಸಂಚಾರವೂ ಶುರುವಾಗಿದೆ.

ಖರೀದಿಗೆ ಮುಗಿಬಿದ್ದ ಜನ: ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಭರಣ ಮಳಿಗೆಗಳು, ಬಟ್ಟೆ ಅಂಗಡಿಗಳಲ್ಲೂ ಭಾರಿ ಸಂಖ್ಯೆಯ ಜನರು ಕಂಡುಬಂದರು. ಕೆಲವು ಕಡೆಗಳಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಖರೀದಿಗೂ ರೈತರು ಭಾರಿ ಸಂಖ್ಯೆಯಲ್ಲಿ ನಗರ, ಪಟ್ಟಣಗಳತ್ತ ಮುಖ ಮಾಡಿದ್ದರು. ಕೆಲವು ಅಂಗಡಿಗಳ ಮುಂದೆ ನೂರಾರು ಮೀಟರ್‌ ಉದ್ದನೆಯ ಸರತಿ ಸಾಲುಗಳಿದ್ದವು.

ಹೋಟೆಲ್‌ಗಳಲ್ಲಿ ಹೆಚ್ಚಿದ ವಹಿವಾಟು: 17 ಜಿಲ್ಲೆಗಳಲ್ಲಿ ಹೋಟೆಲ್‌, ಕ್ಲಬ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹಗಲಿನ ಅವಧಿಯಲ್ಲಿ ಕುಳಿತು ಆಹಾರ ಸೇವಿಸಲು ಅವಕಾಶವಿತ್ತು. ದೊಡ್ಡ ನಗರಗಳಲ್ಲಿ ಪ್ರಮುಖ ಹೋಟೆಲ್‌ಗಳಲ್ಲಿ ಹೆಚ್ಚಿನ ವಹಿವಾಟು ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.