ADVERTISEMENT

ಆಸ್ಪತ್ರೆ: ಸ್ತ್ರೀ ಸಿಬ್ಬಂದಿಗೆ ‘ರಕ್ಷಾ’ ಕೋಟೆ

ದಿನದ 24 ಗಂಟೆಯೂ ನಿಗಾ ವ್ಯವಸ್ಥೆ l ಮಾಜಿ ಸೇನಾಧಿಕಾರಿಗಳ ಉಸ್ತುವಾರಿ l ಭದ್ರತೆಯಲ್ಲಿ ಹೆಚ್ಚಳ

ಚಂದ್ರಹಾಸ ಹಿರೇಮಳಲಿ
Published 22 ಅಕ್ಟೋಬರ್ 2024, 0:30 IST
Last Updated 22 ಅಕ್ಟೋಬರ್ 2024, 0:30 IST
<div class="paragraphs"><p>ಶರಣಪ್ರಕಾಶ ಪಾಟೀಲ</p></div>

ಶರಣಪ್ರಕಾಶ ಪಾಟೀಲ

   

ಬೆಂಗಳೂರು: ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ವೈದ್ಯೆಯರು ಸೇರಿದಂತೆ ಮಹಿಳಾ ಸಿಬ್ಬಂದಿ ಸುರಕ್ಷತೆಗೆ ಸರ್ಕಾರ ಹೊಸ ನಿಯಮ ಸಿದ್ಧಪಡಿಸಿದ್ದು, ರಕ್ಷಣಾ ಕಣ್ಗಾವಲಿಗೆ ಸೇನೆಯ ಮಾಜಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ನಂತರ ಸುಪ್ರೀಂಕೋರ್ಟ್‌ ಸೂಚನೆಯಂತೆ ರಾಜ್ಯದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲೂ ವೈದ್ಯಕೀಯ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಸಿಬ್ಬಂದಿ ಸುರಕ್ಷತೆಗೆ ನಿರ್ಭಯ ಕಾಯ್ದೆಯ ಶಿಫಾರಸುಗಳನ್ನೂ ಒಳಗೊಂಡು ಹಲವು ಹಂತಗಳ ಹೊಸ ನಿಯಮಾವಳಿ ರೂಪಿಸಲಾಗಿದೆ.

ADVERTISEMENT

ಕಣ್ಗಾವಲಿಗೆ ನೇಮಿಸಿಕೊಂಡ ಸೇನೆಯ ಮಾಜಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನದ 24 ಗಂಟೆ ಕೆಲಸ ಮಾಡಲಿದ್ದಾರೆ. ನಿಯಂತ್ರಣ ಕೊಠಡಿಗಳನ್ನೂ ಅವರೇ ನಿರ್ವಹಿಸಲಿದ್ದಾರೆ. ಪ್ರಮುಖವಾದ ಎಲ್ಲ ಸ್ಥಳ, ಕೊಠಡಿಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ನಿಯಂತ್ರಣ ಕೊಠಡಿಯಲ್ಲಿ ಕುಳಿತು ಪ್ರತಿಕ್ಷಣದ ದೃಶ್ಯಾವಳಿಯನ್ನು ವೀಕ್ಷಿಸಲಾಗುತ್ತದೆ. ಅನುಮಾನಾಸ್ಪದ ಚಲನವಲನ, ಘಟನೆಗಳು ಕಂಡುಬಂದರೆ ತಕ್ಷಣ ತುರ್ತು ಸಂದೇಶ ರವಾನಿಸಲಾಗುತ್ತದೆ. ಪ್ರತಿ ಆಸ್ಪತ್ರೆಯಲ್ಲೂ ರಚಿಸಲಾಗುವ ಭದ್ರತಾ ಸಮಿತಿಯು ಸ್ಥಳೀಯ ಪೊಲೀಸರನ್ನು ಒಳಗೊಂಡಿರುತ್ತದೆ. ಮಹಿಳಾ ದೌರ್ಜನ್ಯದ ಪ್ರಕರಣಗಳ ಸುಳಿವು ಸಿಕ್ಕ ತಕ್ಷಣ ರಕ್ಷಣಾ ತಂಡ ನೆರವಿಗೆ ಧಾವಿಸುತ್ತದೆ.

ಆಸ್ಪತ್ರೆ, ಹಾಸ್ಟೆಲ್‌ ನಡುವೆ ವಾಹನ ಸೌಲಭ್ಯ: ಆರೋಗ್ಯ ಸಿಬ್ಬಂದಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ರಾತ್ರಿ ಪಾಳಿಯೂ ಕಡ್ಡಾಯವಾಗಿರುತ್ತದೆ. ತುರ್ತು ಸಮಯಗಳಲ್ಲಿ ದಿನದ 24 ಗಂಟೆಯೂ ರೋಗಿಗಳ ಆರೈಕೆ ಮಾಡುವ ಅನಿವಾರ್ಯ ಇರುತ್ತದೆ. ಅವರ ವಸತಿಗೃಹಗಳು, ಹಾಸ್ಟೆಲ್‌, ಆಸ್ಪತ್ರೆ, ಕಾಲೇಜಿನ ಕ್ಯಾಂಪಸ್‌ ಒಳಗೆ ಇದ್ದರೂ, ಕೆಲವೊಮ್ಮೆ ವಿಶಾಲವಾದ ಕ್ಯಾಂಪಸ್‌ಗಳ ಒಳಗೆ ನಡೆದು ಹೋಗುವಾಗ ಅಪಾಯಗಳು ಎದುರಾಗುವ ಸಂಭವ ಇರುತ್ತದೆ. ಅದಕ್ಕಾಗಿ ಅವರನ್ನು ಕರೆತರುವಾಗ, ಬಿಡುವಾಗ ವಾಹನ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 

ಅಧಿಕ ಸಂಖ್ಯೆಯ ಸಿಬ್ಬಂದಿ ಒಟ್ಟಿಗೆ ತೆರಳುವಾಗ ದೊಡ್ಡ ವಾಹನಗಳು, ಒಬ್ಬಿಬ್ಬರು ಇದ್ದರೆ ಚಿಕ್ಕ ಎಲೆಕ್ಟ್ರಿಕಲ್‌ ಬಗ್ಗಿಗಳನ್ನು (ಇವಿ) ಬಳಸಬೇಕು. ರಾತ್ರಿ ಪಾಳಿಯ ಸಿಬ್ಬಂದಿಗೆ ಅವರ ಮನೆ, ಪಿ.ಜಿಗಳಿಂದ ಬರುವವರಿಗೂ ವಾಹನ ವ್ಯವಸ್ಥೆ ಕಲ್ಪಿಸಬೇಕು. ಆಸ್ಪತ್ರೆ, ಹಾಸ್ಟೆಲ್‌ ನಡುವಿನ ದಾರಿಯುದ್ದಕ್ಕೂ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ದಾರಿಯ ಆಯಕಟ್ಟಿನ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಲಾಗಿದೆ.  

ಆರೋಗ್ಯ ಸಿಬ್ಬಂದಿಯ ಜತೆಗೆ ಮಹಿಳಾ ರೋಗಿಗಳ ಗುಣಮಟ್ಟದ ಆರೈಕೆ, ಅವರ ಸುರಕ್ಷತೆ ಹಾಗೂ ಯೋಗಕ್ಷೇಮಕ್ಕೂ ಒತ್ತು ನೀಡಲು ಪ್ರತ್ಯೇಕ ಮಾರ್ಗದರ್ಶಿ ರೂಪಿಸಲಾಗಿದೆ. 

ರಕ್ಷಣಾ ನಿಯಮಗಳೇನು?

* ಪ್ರತಿ ಆಸ್ಪತ್ರೆಯಲ್ಲೂ ಬಿಗಿ ಭದ್ರತಾ ವ್ಯವಸ್ಥೆ ತಪಾಸಣೆಯ ನಂತರವೇ ಒಳ ಪ್ರವೇಶ. ರೋಗಿಗಳು ಮತ್ತು ಅವರ ಸಹಾಯಕರಿಗಷ್ಟೇ ಅವಕಾಶ

*  ಆರೋಗ್ಯ ಸಿಬ್ಬಂದಿಯನ್ನು ಗುರುತಿಸಲು ನಿರ್ದಿಷ್ಟ ಬಣ್ಣ ಒಳಗೊಂಡ ಗುರುತು ಪಟ್ಟಿಗಳು ಗುರುತುಪತ್ರ ವಿತರಣೆ 

* ಎಲ್ಲ ವೈದ್ಯೆಯರು ವಿದ್ಯಾರ್ಥಿನಿಯರು ಮಹಿಳಾ ಸಿಬ್ಬಂದಿಗೆ ಸ್ವಯಂ ರಕ್ಷಣಾ ತಂತ್ರಗಳ ತರಬೇತಿ. ಪ್ರಮುಖ ಸ್ಥಳಗಳಲ್ಲಿ ಪ್ಯಾನಿಕ್‌ ಬಟನ್‌ಗಳ ಅಳವಡಿಕೆ

* ವಿಪತ್ತು ಎದುರಿಸಲು ಅಗತ್ಯ ಮನೋಸ್ಥೈರ್ಯ ಮೂಡಿಸಲು ಮನೋವೈದ್ಯ ಶಾಸ್ತ್ರ ವಿಭಾಗದಿಂದ ಸಮಾಲೋಚನೆ 

* ಕಿರುಕುಳಕ್ಕೆ ಒಳಗಾದವರಿಗೆ ಅಗತ್ಯ ಕಾನೂನು ಮತ್ತು ನೈತಿಕ ರಕ್ಷಣೆ ನೀಡಲು ಪ್ರತ್ಯೇಕ ವಿಭಾಗಗಳ ಆರಂಭ

* ವಾರಕ್ಕೆ ಒಮ್ಮೆ ಆಂತರಿಕ ದೂರು ಸಮಿತಿ ಭದ್ರತಾ ಸಮಿತಿ ಸಭೆ. ಪ್ರಕರಣಗಳ ವಿಚಾರಣೆ ಪರಾಮರ್ಶೆ 

* ಮಹಿಳೆಯರಿಗೆ ಸಂಪೂರ್ಣ ಸುರಕ್ಷತೆ ಒಳಗೊಂಡ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು

ಗೌಪ್ಯ ದೂರಿಗೆ ಪಿಂಕ್‌ ಪೆಟ್ಟಿಗೆ 

ಹೊಸ ನಿಯಮದ ಪ್ರಕಾರ ಪ್ರತಿ ಆಸ್ಪತ್ರೆ ವೈದ್ಯಕೀಯ ಕಾಲೇಜುಗಳ ಕೆಲ ಸ್ಥಳಗಳಲ್ಲಿ ಪಿಂಕ್‌ ದೂರು ಪೆಟ್ಟಿಗೆಗಳನ್ನು ಸ್ಥಾಪಿಸಬೇಕಿದೆ. ವೈದ್ಯಕೀಯ ವಿದ್ಯಾರ್ಥಿನಿಯರು ಮಹಿಳಾ ಸಿಬ್ಬಂದಿ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕಿರುಕುಳ ಲಿಂಗ ಆಧಾರಿತ ತಾರತಮ್ಯ ಪ್ರಕರಣಗಳಲ್ಲಿ ದೂರು ಮಾಹಿತಿ ನೀಡಲು ಹಿಂದೇಟು ಹಾಕುವ ಮಹಿಳೆಯರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪತ್ರಗಳ ಮೂಲಕ ಹಂಚಿಕೊಳ್ಳಬಹುದು. ಅಂಥವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ದೂರಿನಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಚಲನವಲನ ಮೇಲೆ ನಿಗಾವಹಿಸಲು ಪ್ರತ್ಯೇಕ ಪಡೆ ರಚಿಸಲಾಗುತ್ತಿದ್ದು ಅವರ ನಡವಳಿಕೆಯ ವರದಿಯನ್ನು ಆಂತರಿಕ ದೂರು ಸಮಿತಿಗೆ ಸಲ್ಲಿಸಲಾಗುತ್ತದೆ. ನಂತರ ವಿಚಾರಣೆಗೆ ಒಳಪಡಿಸಲಾಗುತ್ತದೆ. 

ಮಹಿಳಾ ಸುರಕ್ಷತೆ ಕೇಂದ್ರ ಸಮಿತಿ 

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಹಿಳಾ ಸುರಕ್ಷತೆಯ ಕೇಂದ್ರ ಸಮಿತಿ ರಚಿಸಲಾಗಿದೆ. ಕೇಂದ್ರ ಸಮಿತಿ ಪ್ರತಿ ತಿಂಗಳು ಸಭೆ ಸೇರಿ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿ ಮೇಲಿನ ದೌರ್ಜನ್ಯ ಪ್ರಕರಣಗಳು ಕೈಗೊಂಡ ಕ್ರಮಗಳು ದೌರ್ಜನ್ಯ ತಡೆಗೆ ಅನುಸರಿಸಿದ ಮಾರ್ಗ ನಿಯಮಗಳ ಪಾಲನೆ ಕುರಿತು ಪರಾಮರ್ಶೆ ನಡೆಸಲಿದೆ. ಪ್ರತಿ ಆಸ್ಪತ್ರೆ ವೈದ್ಯಕೀಯ ಕಾಲೇಜುಗಳಿಗೆ ಅಗತ್ಯ ಸಲಹೆ ಸಹಕಾರ ನೀಡಲಿದೆ. ಈ ಸಮಿತಿ ಅಡಿಯಲ್ಲಿ ಪ್ರತಿ ಆಸ್ಪತ್ರೆಯಲ್ಲೂ ಹಿಂಸೆ ತಡೆ ಸಮಿತಿ ಆಂತರಿಕ ದೂರು ಸಮಿತಿ ಆಸ್ಪತ್ರೆ ಭದ್ರತಾ ಸಮಿತಿಗಳು ಕಾರ್ಯನಿರ್ವಹಿಲಿವೆ. 

ಹಿಂದಿನ ನಿಯಮಗಳಲ್ಲಿನ ಎಲ್ಲ ಲೋಪಗಳನ್ನು ಸರಿಪಡಿಸಲಾಗಿದೆ. ಮುಖ್ಯವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಲಾಗುತ್ತಿದೆ
ಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ಶರಣಪ್ರಕಾಶ ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.