ಬೆಳಗಾವಿ: ಸಕ್ಕರೆ ಜಿಲ್ಲೆ ಬೆಳಗಾವಿಯ, ಸಹಕಾರ ತಳಹದಿಯ ಕ್ಷೇತ್ರ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಶಾಸಕ ಉಮೇಶ್ ಕತ್ತಿ ವಿಶಿಷ್ಟ ರಾಜಕಾರಣಿ. ಸ್ವಸಾಮರ್ಥ್ಯದಿಂದ ಬೆಳೆದವರಲ್ಲಿ ಪ್ರಮುಖರು. ಒಟ್ಟು 8 ಬಾರಿ ಆಯ್ಕೆಯಾಗಿ ಹಿರಿಯ ಶಾಸಕರೆಂದು ಗುರುತಿಸಿಕೊಂಡಿದ್ದರು.
ಸಕ್ಕರೆ, ಲೋಕೋಪಯೋಗಿ, ತೋಟಗಾರಿಕೆ ಹಾಗೂ ಬಂದೀಖಾನೆ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಜಿಲ್ಲೆಯ ಅಭಿವೃದ್ಧಿ ಕೈಗೊಂಡ ನಾಯಕ.
ಕತ್ತಿ ಮನೆತನದಲ್ಲಿ: 1960ರಲ್ಲಿ ಬೆಲ್ಲದ ಬಾಗೇವಾಡಿಯ ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಹಿರಿಯ ಸಹಕಾರಿ ವಿಶ್ವನಾಥ–ರಾಜೇಶ್ವರಿ ದಂಪತಿಯ ಜೇಷ್ಠ ಪುತ್ರನಾಗಿ ಜನಿಸಿದರು. ಸ್ವಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು.
ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವರಾಗಿ 2011ರ ಮಾರ್ಚ್ 11ರಿಂದ13ರವರೆಗೆ ವಿಶ್ವಕನ್ನಡ ಸಮ್ಮೇಳನವನ್ನು ಅಭೂತಪೂರ್ವವಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 86 ಸ್ಥಾನಗಳ ಪೈಕಿ 64ರಲ್ಲಿ ಸ್ಥಾನಗಳನ್ನು ಗೆಲ್ಲಿಸಿ ಪ್ರಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾದರು.
25ನೇ ವಯಸ್ಸಿನಲ್ಲೇ ರಾಜಕಾರಣ: ವಿಧಾನಸಭೆಯನ್ನು 1985ರಲ್ಲಿ ಜನತಾ ಪಕ್ಷದಿಂದ ಪ್ರವೇಶಿಸಿದರು. ಆಗ ಅವರಿಗೆ 25 ವರ್ಷ ವಯಸ್ಸು. ಚಿಕ್ಕ ವಯಸ್ಸಿನಲ್ಲಿಯೇ ಅಧಿಕಾರದ ಚುಕ್ಕಾಣಿ ಹಿಡಿದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. 1989, 1994ರಲ್ಲಿ ಪುನರಾಯ್ಕೆಯಾದ ನಂತರ ಅವರ ರಾಜಕೀಯ ಜೀವನದಲ್ಲಿ ಅನೇಕ ಮಹತ್ವದ ಬದಲಾವಣೆಗಳಾದವು. 1995ರಲ್ಲಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದರು. ಐತಿಹಾಸಿಕ ದಾಖಲೆ ಜತೆ ಸಹೋದರ ರಮೇಶ ಕತ್ತಿ ಕಾರ್ಖಾನೆ ಅಧ್ಯಕ್ಷರಾದರು. ಈಗಲೂ ಆಡಳಿತ ಕತ್ತಿ ಸಹೋದರರ ಕೈಲಿದೆ.
ಒಮ್ಮೆ ಸೋತರೂ ಕಂಗೆಡದೆ ತಂದೆ ಹೆಸರಿನಲ್ಲಿ ಬೆಲ್ಲದ ಬಾಗೇವಾಡಿಯಲ್ಲಿ ವಿಶ್ವನಾಥ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಈ ಭಾಗದ ಸಾವಿರಾರು ರೈತರು ಮತ್ತು ಕಾರ್ಮಿಕರ ಆರ್ಥಿಕ ಏಳಿಗೆಗೆ ಕಾರಣರಾಗಿದ್ದಾರೆ. ಕಾರ್ಖಾನೆ ಸಾರಥ್ಯವನ್ನು ಪುತ್ರ ನಿಖಿಲ್ ಕತ್ತಿಗೆ ವಹಿಸಿಕೊಟ್ಟಿದ್ದಾರೆ.
ಪ್ರತಿಷ್ಠಿತ ಕೆ.ಎಲ್.ಇ.ಸಂಸ್ಥೆಗೆ ₹40 ಲಕ್ಷ ದೇಣಿಗೆ ನೀಡಿದ್ದಾರೆ. ರಾಜಕೀಯ ಜೀವನದಲ್ಲಿ ಅವಿರತ ಹೋರಾಟ ಮಾಡುತ್ತಾ ವಿಜಯಶಾಲಿಯಾಗಲು ನೆರವಾಗುತ್ತಿದ್ದ ಸಹೋದರ ರಮೇಶ ಕತ್ತಿ 2009ರಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾಗಲು ಶ್ರಮಿಸಿದರು. 2017ರಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದವರು. ಪುತ್ರ ನಿಖಿಲ್ ಕತ್ತಿ ಅವರನ್ನು ಅಮ್ಮಣಗಿ ಹಾಗೂ ಸಹೋದರ ರಮೇಶ ಕತ್ತಿ ಅವರ ಪುತ್ರ ಪವನ್ ಕತ್ತಿಯನ್ನು ನಾಗರಮುನ್ನೋಳಿ ಕ್ಷೇತ್ರಗಳಿಂದ ಗೆಲ್ಲಿಸಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡಿದ್ದಾರೆ.
ಪ್ರಮುಖ ಕೆಲಸಗಳು: ಹುಕ್ಕೇರಿ ಮತ್ತು ಸಂಕೇಶ್ವರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ, ಹೈಟೆಕ್ ಬಸ್ ನಿಲ್ದಾಣ, ಅಗ್ನಿಶಾಮಕ ಠಾಣೆ ಸ್ಥಾಪನೆ, ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆ, ತಾಲ್ಲೂಕು ಕ್ರೀಡಾಂಗಣ ನಿರ್ಮಾಣ, 27 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ, ಎರಡು ಪುರಸಭೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ₹ 20 ಕೋಟಿ ವೆಚ್ಚದಲ್ಲಿ 240 ಕಿ.ಮೀ. ರಸ್ತೆ ಸುಧಾರಣೆ ಮಾಡಿಸಿದ್ದಾರೆ. 6 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಯಡಿ ಸೇರಿಸಿದ್ದು, ಬಸ್ ಡಿಪೊ ಮಂಜೂರು ಮಾಡಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನ ಪ್ರಮುಖವಾದವು.
1998ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಅವರಗೋಳ-ಘೋಡಗೇರಿ ನಡುವೆ ಹಿರಣ್ಯಕೇಶಿ ನದಿಗೆ ತೂಗುಸೇತುವೆ, ಕೊಟಬಾಗಿ ಏತ ನೀರಾವರಿ ಯೋಜನೆ, ಬಡಕುಂದ್ರಿ ಬಳಿ ಹಿರಣ್ಯಕೇಶಿ ನದಿಗೆ ಸರ್ವಋತು ಸೇತುವೆ, ಸಮುದಾಯ ಭವನ ನಿರ್ಮಿಸಿದ್ದು, ಅವರ ಕಾರ್ಯ ದಕ್ಷತೆಗೆ ಕನ್ನಡಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.