ಬೆಂಗಳೂರು: ‘ಸರ್ಕಾರ ನಡೀತಾ ಇಲ್ಲ. ಇಲ್ಲಿ, ಮ್ಯಾನೇಜ್ ಮಾಡ್ತಾ ಇದ್ದೀವಿ ಅಷ್ಟೇ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಾತು ಮುಂದುವರಿಸಿರುವ ಸಚಿವರು, ‘ತಳ್ಳಿದರೆ ಸಾಕಷ್ಟೆ. ಎಂಟು ತಿಂಗಳಷ್ಟೆ ಅಂತ ತಳ್ತಾ ಇದೀವಿ ಕಣಪ್ಪಾ’ ಎಂದೂ ಹೇಳುತ್ತಾರೆ.
ಈ ಸಂಬಂಧ, ಪ್ರತಿಕ್ರಿಯೆ ಪಡೆಯಲು ಮಾಧುಸ್ವಾಮಿ ಅವರಿಗೆ ಕರೆ ಮಾಡಿದರೆ ಅವರ ಆಪ್ತ ಸಹಾಯಕರು ಕರೆ ಸ್ವೀಕರಿಸಿದರೇ ವಿನಃ ಸಚಿವರು ಸಂಪರ್ಕಕ್ಕೆ ಸಿಗಲಿಲ್ಲ.
ಚನ್ನಪಟ್ಟಣದಿಂದ ಕರೆ ಮಾಡುವ ಭಾಸ್ಕರ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು, ‘ವಿಎಸ್‌ಎಸ್‌ಎನ್ ಬ್ಯಾಂಕಿನಿಂದ ₹50 ಸಾವಿರ ಸಾಲ ಪಡೆದು ಕಟ್ಟಲು ಹೋದರೆ ಸಾಲ ನವೀಕರಣದ ಹೆಸರಿನಲ್ಲಿ ಬ್ಯಾಂಕ್ ಸಿಬ್ಬಂದಿ ₹1300 ಪಡೆಯುತ್ತಿದ್ದಾರೆ. ಫುಲ್ ದುಡ್ಡನ್ನು ಅವರು ಪಡೆದು ಮತ್ತೆ ಬಡ್ಡಿಗೆ ಅಂತ ಹಾಕ್ತಾ ಇದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದೂ ಮನವಿ ಮಾಡುತ್ತಾರೆ.
ಇದಕ್ಕೆ ಮಾಧುಸ್ವಾಮಿ ಅವರು, ‘ಇವೆಲ್ಲವೂ ನನಗೆ ಗೊತ್ತಪ್ಪ. ನಿಮ್ಮೂರಲ್ಲಿ ಒಂದೇ ಅಲ್ಲ. ರಾಜ್ಯದ ಎಲ್ಲ ಕಡೆ ನಡೀತಾ ಇದೆ. ಸನ್ಮಾನ್ಯ ಸಚಿವ ಸೋಮಶೇಖರ್ ಅವರ ಗಮನಕ್ಕೂ ತಂದಿದ್ದೇವೆ. ಬಡ್ಡಿ ಹೊಡೆದುಕೊಂಡು ತಿಂತಾ ಇದ್ದಾರೆ. ಅಡಿಶನಲ್ ಸೆಸ್ ಅಂತ
ಹಾಕ್ತಾ ಇದ್ದಾರೆ. ಬಡ್ಡಿ ವಸೂಲಿ ಮಾಡ್ತಿದ್ದಾರೆ ಎಂದೂ ಹೇಳಿದ್ದೇನೆ. ಕ್ರಮ ಜರುಗಿಸ್ತಾ ಇಲ್ಲ, ನಾವೇನು ಮಾಡಾಣ. ರೈತರಲ್ಲ, ನಾನೇ ಕಟ್ಟಿದ್ದೇನೋ ಮಾರಾಯ. ನಂತಾವ್ಲೇ ತಗಂಡ್ರಲ್ಲ’ ಎಂದೂ ಅವರು ಹೇಳುತ್ತಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ಸರ್ಕಾರದ ನಿಷ್ಕ್ರಿಯತೆ, ಸಚಿವರ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಮಾಧುಸ್ವಾಮಿಯವರಿಂದ ಬಯಲಾಗಿದೆ. ಈ ಸರ್ಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ ಮಾತ್ರ’ ಎಂದು ಕುಟುಕಿದೆ.
‘ಇನ್ನೆಂಟು ತಿಂಗಳು ಅಂತ ತಳ್ತಾ ಇದೀವಿ ಅಷ್ಟೇ’ ಎಂಬುದು ಸಚಿವ ಮಾಧುಸ್ವಾಮಿಯವರ ಅಸಹಾಯಕತೆಯೋ, ತಮ್ಮದೇ ಸರ್ಕಾರದ ವಿರುದ್ಧದ ಆರೋಪವೋ’ ಎಂದು ಪ್ರಶ್ನಿಸಿರುವ ಕಾಂಗ್ರೆಸ್,‘ರೈತರಿಗೆ ಅಷ್ಟೇ ಅಲ್ಲ, ಸ್ವತಃ ಕಾನೂನು ಸಚಿವರಿಗೆ ಸಹಕಾರಿ ಬ್ಯಾಂಕುಗ
ಳಲ್ಲಿ ವಂಚನೆಯಾಗುತ್ತಿರುವುದು ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿ’ ಎಂದು ವ್ಯಂಗ್ಯವಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.