ಬೆಂಗಳೂರು:ಅಗತ್ಯ ಸೇವೆಗಳ ಅಡಿಯಲ್ಲಿ ಸಾರಿಗೆ ನೌಕರರ ಮುಷ್ಕರವನ್ನು ಇದೇ 30ರವರೆಗೆ ನಿಷೇಧಿಸಿದ್ದ ರಾಜ್ಯ ಸರ್ಕಾರ, ಇದೀಗ ಡಿ. 31ರವರೆಗೆ ಆ ಆದೇಶವನ್ನುವಿಸ್ತರಿಸಿದೆ.
‘ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ– 2013ರಡಿ ಅಗತ್ಯ ಸೇವೆಗಳಲ್ಲಿ ಮುಷ್ಕರ ನಿಷೇಧಿಸಿ, ಫೆ. 2ರಂದು ಆದೇಶ ಹೊರಡಿಸಲಾಗಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ಇಂಥ ಆದೇಶ ಹೊರಡಿಸಲಾಗುತ್ತದೆ’ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ
‘ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಮತ್ತೆ ಮುಷ್ಕರಕ್ಕೆ ಸಿದ್ಧವಾಗುತ್ತಿರುವ ಸುಳಿವು ಸಿಕ್ಕಿದ ಕಾರಣಕ್ಕೆ, ಜುಲೈ ಒಂದರಿಂದ, ಡಿಸೆಂಬರ್ ಅಂತ್ಯದವರೆಗೆ ಅದಕ್ಕೆ ಅವಕಾಶ ನೀಡದಿರಲು, ಮುಷ್ಕರ ಹತ್ತಿಕ್ಕಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ’ ಎನ್ನುವುದು ಸಾರಿಗೆ ನೌಕರರ ಆರೋಪ.
ಈ ಬಾರಿ ಕುಟುಂಬಸಹಿತ ಬೀದಿಗಿಳಿದು ಪ್ರತಿಭಟಿಸಲು ನೌಕರರು ರೂಪುರೇಷೆ ಸಿದ್ಧಪಡಿಸುತ್ತಿದ್ದು, ಜುಲೈ ಮೊದಲ ವಾರ ಸಭೆ ನಡೆಸಿ ದಿನ ನಿಗದಿಪಡಿಸಲು ಮುಂದಾಗಿದ್ದರು. ಸರ್ಕಾರ ಕೊಟ್ಟ ಮಾತಿನಂತೆ ಆರನೇ ವೇತನ ಆಯೋಗ ಜಾರಿ ಮಾಡಬೇಕು, ಮುಷ್ಕರದಲ್ಲಿ ಭಾಗಿಯಾದ ನೌಕರರ ವರ್ಗಾವಣೆ, ಅಮಾನತು ಆದೇಶ ರದ್ದಪಡಿಸಬೇಕು. ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ನೌಕರರು ಚಿಂತನೆ ನಡೆಸಿದ್ದಾರೆ.
₹ 4ಸಾವಿರ ಕೋಟಿ ನಷ್ಟ
ಬೆಳಗಾವಿ: ‘ಕೋವಿಡ್ ಅವಧಿಯಲ್ಲಿ ಸಾರಿಗೆ ಇಲಾಖೆಗೆ ಈವರೆಗೆ ₹ 4 ಸಾವಿರ ಕೋಟಿ ನಷ್ಟ ಉಂಟಾಗಿದೆ’ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನೌಕರರಿಗೆ ಸಂಪೂರ್ಣ ವೇತನ ಕೊಡುತ್ತಿದ್ದೇವೆ. ಈಗ ಬರುತ್ತಿರುವ ಆದಾಯದಿಂದ ವೇತನ ಕೊಡಲು ಹಾಗೂ ಇಂಧನಕ್ಕೂ ಕೊರತೆ ಆಗುತ್ತಿದೆ’ ಎಂದು ಹೇಳಿದರು.
ಜುಲೈ 5ರ ಬಳಿಕ ಸಾರಿಗೆ ಸಿಬ್ಬಂದಿ ಮತ್ತೆ ಹೋರಾಟ ಮಾಡಲಿದ್ದಾರೆ ಎಂಬ ಬಗ್ಗೆ ಅವರು, ‘ಪ್ರತಿಭಟನೆ ನಡೆಸುವುದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ. ತಪ್ಪು ಮಾಹಿತಿ, ಹುನ್ನಾರದಿಂದ ಮುಷ್ಕರ ನಡೆಸಿದ್ದೆವು. ಈಗ, ನಿಮ್ಮೊಂದಿಗೆ ಇರುತ್ತೇವೆ ಎಂದಿದ್ದಾರೆ’ ಎಂದು ತಿಳಿಸಿದರು.
‘ಇಲಾಖೆ ಜವಾಬ್ದಾರಿ ತಗೆದುಕೊಂಡ ಬಳಿಕ 20 ಜಿಲ್ಲೆಗಳಲ್ಲಿ ಅತಿವೃಷ್ಟಿ, ನೆರೆ ಉಂಟಾಯಿತು. ಚೇತರಿಸಿಕೊಳ್ಳುವಷ್ಟರಲ್ಲಿ ಕೊರೊನಾ ಮೊದಲ ಅಲೆ, ಬಳಿಕ ಸಿಬ್ಬಂದಿ ಮುಷ್ಕರ, ಈಗ 2ನೇ ಅಲೆ ಎದುರಾಯಿತು’ ಎಂದು ಇಲಾಖೆ ಎದುರಿಸಿದ ಸಮಸ್ಯೆಗಳನ್ನು ಪಟ್ಟಿಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.