ADVERTISEMENT

ಬಸ್‌ ಪ್ರಯಾಣ ದರ ಏರಿಕೆಗೆ ಚಿಂತನೆ: ಡಿ.ಸಿ.ತಮ್ಮಣ್ಣ

ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪಾಸ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 16:07 IST
Last Updated 20 ಜೂನ್ 2018, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಷ್ಟ ಭರಿಸಲು ಪ್ರಯಾಣ ದರ ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ತಕ್ಷಣದಲ್ಲಿ ದರ ಹೆಚ್ಚಿಸುವ ಉದ್ದೇಶವಿಲ್ಲ. ಪ್ರಯಾಣ ದರವನ್ನು ಶೇ 15 ರಷ್ಟು ಹೆಚ್ಚಿಸುವಂತೆಕೆಎಸ್ಆರ್‌ಟಿಸಿ ಪ್ರಸ್ತಾವನೆ ನೀಡಿದೆ ಎಂದು ಹೇಳಿದರು.

‘ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಬೇಕಾಗಿದೆ. ನಷ್ಟವನ್ನು ತುಂಬಿಕೊಳ್ಳಲು ಖರ್ಚು– ವೆಚ್ಚಗಳನ್ನು ತಗ್ಗಿಸುವ ಮತ್ತು ಆದಾಯವನ್ನು ಹೆಚ್ಚಿಸುವ ಬಗ್ಗೆ ಗಮನಹರಿಸಲಾಗುತ್ತಿದೆ’ ಎಂದರು.

ADVERTISEMENT

‘ನಮ್ಮದು ಹೊಸ ಸರ್ಕಾರ, ಪ್ರಯಾಣಿಕರ ಮೇಲೆ ಹೊರೆ ಹೊರಿಸುವ ಮನಸ್ಸಿಲ್ಲ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ತಮ್ಮಣ್ಣ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರಿ ಸ್ವಾಮ್ಯದ ಎಲ್ಲ ನಾಲ್ಕು ಸಂಸ್ಥೆಗಳು (ಕೆಎಸ್‌ಆರ್‌ಟಿಸಿ, ಈಶಾನ್ಯ ಸಾರಿಗೆ, ನೈರುತ್ಯ ಸಾರಿಗೆ ಮತ್ತು ಬಿಎಂಟಿಸಿ) ಶೇ 15 ಹೆಚ್ಚಳದ ಪ್ರಸ್ತಾವನೆ ಸಲ್ಲಿಸಿವೆ. ಮೂರೂವರೆ ವರ್ಷದ ಬಳಿಕ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2014 ರಲ್ಲಿ ಶೇ 7.96 ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆ ಬಳಿಕ ದರ ಏರಿಕೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಡಿಸೆಲ್‌ ದರ ವಿಪರೀತ ಏರಿಕೆ ಆಗಿದೆ. ಸಾರಿಗೆ ಸಂಸ್ಥೆಗಳ ಸಿಬ್ಬಂದಿ ವೇತನವನ್ನೂ ಹೆಚ್ಚಿಸಲಾಗಿದೆ. ಪ್ರತಿ ತಿಂಗಳು ₹ 450 ರಿಂದ 500 ಕೋಟಿ ಅಧಿಕ ಹೊರೆ ಆಗುತ್ತಿದೆ ಇದನ್ನು ಸರಿದೂಗಿಸಲು ಇರುವ ಒಂದೇ ದಾರಿ ಎಂದರೆ, ಪ್ರಯಾಣ ದರ ಹೆಚ್ಚಳ ಎಂದು ಅಧಿಕಾರಿಗಳು ಹೇಳಿದರು.

ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪಾಸ್‌

‘ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ನೀಡಲು ನಾವು ಸಿದ್ಧರಿದ್ದೇವೆ. ಆದರೆ, ಶಿಕ್ಷಣ ಇಲಾಖೆಯು ಸಾರಿಗೆ ಇಲಾಖೆಯ ಆರ್ಥಿಕ ಹೊರೆಯನ್ನು ಸ್ವಲ್ಪಮಟ್ಟಿಗಾದರೂ ಭರಿಸಬೇಕು’ ಎಂದು ಡಿ.ಸಿ.ತಮ್ಮಣ್ಣ ತಿಳಿಸಿದರು.

‘ಹಿಂದಿನ ಸರ್ಕಾರದ ಭರವಸೆ ಈಡೇರಿಸುವುದು ನಮ್ಮ ಕರ್ತವ್ಯ. ಯೋಜನೆ ಕಾರ್ಯಗತ ಮಾಡುತ್ತೇವೆ. ಇದರಿಂದ ದೊಡ್ಡ ಮಟ್ಟದ ಆರ್ಥಿಕ ಹೊರೆ ಆಗುತ್ತದೆ. ಮುಖ್ಯಮಂತ್ರಿಯವರ ಜತೆ ಚರ್ಚಿಸುತ್ತೇನೆ. ಅವರು ಒಪ್ಪಿಗೆ ನೀಡಿದ ತಕ್ಷಣವೇ ಜಾರಿ ಮಾಡುತ್ತೇವೆ’ ಎಂದು ಅವರು ಹೇಳಿದರು.

‘ಉಚಿತ ಪಾಸ್‌ ಯೋಜನೆಗೆ ಸಾರಿಗೆ ಇಲಾಖೆ ಶೇ 15 ರಷ್ಟು ವೆಚ್ಚ ಭರಿಸುತ್ತದೆ. ಶಿಕ್ಷಣ ಇಲಾಖೆ ತನ್ನ ಪಾಲನ್ನೂ ನೀಡಲು ಮುಂದಾಗಬೇಕು’ ಎಂದು ಮನವಿ ಮಾಡಿದರು.

‘ಈಗ ವಿದ್ಯಾರ್ಥಿ ಪಾಸ್‌ಗಾಗಿ ಸರ್ಕಾರ ಶೇ 50 ಮತ್ತು ರಾಜ್ಯ ಸಾರಿಗೆ ಸಂಸ್ಥೆ ಶೇ 25 ರಷ್ಟು ಹಣ ನೀಡುತ್ತಿವೆ. ಉಳಿದ ಶೇ 25 ರಷ್ಟು ಹಣವನ್ನು ವಿದ್ಯಾರ್ಥಿಗಳೇ ಭರಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.