ADVERTISEMENT

ಪಾಕ್‌ ಜಿಂದಾಬಾದ್‌ ಘೋಷಣೆ ಆರೋಪ: ವಿಡಿಯೊದಲ್ಲಿ ನಾಸಿರ್ ಹುಸೇನ್ ಹೇಳಿದ್ದಿಷ್ಟು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2024, 4:19 IST
Last Updated 28 ಫೆಬ್ರುವರಿ 2024, 4:19 IST
Venugopala K.
   Venugopala K.

ಬೆಂಗಳೂರು: ರಾಜ್ಯಸಭಾ ಚುನಾವಣೆ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂಬ ಬಿಜೆಪಿ ಆರೋಪದ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿರುವ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಈ ಕುರಿತು ಸ್ಪಷ್ಟನೆ ನೀಡಿ ವಿಡಿಯೊವೊಂದನ್ನು ಮಂಗಳವಾರ ಸಂಜೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇವತ್ತು ನಮ್ಮ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಇತರರು ಪಕ್ಷದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಮೂವರು ಅಭ್ಯರ್ಥಿಗಳ ಗೆಲುವನ್ನು ಸಂಭ್ರಮಿಸುತ್ತಿದ್ದರು. ನಾನೂ ಸಹ ಅಲ್ಲಿ ಇದ್ದೆ. ನಾಸಿರ್ ಹುಸೇನ್ ಜಿಂದಾಬಾದ್, ನಾಸಿರ್ ಖಾನ್ ಜಿಂದಾಬಾದ್, ನಾಸಿರ್ ಸಾಹೇಬ್ ಜಿಂದಾಬಾದ್ ಮತ್ತು ಕಾಂಗ್ರೆಸ್ ಪಾರ್ಟಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೆಲ ಬೆಂಬಲಿಗರು ಕೂಗಿದರು ಎಂದಿದ್ದಾರೆ.

‘ನಾನು ಮನೆಗೆ ತೆರಳುತ್ತಿದ್ದಾಗ ಮಾಧ್ಯಮಗಳಿಂದ ನನಗೆ ಕರೆ ಬಂದಿತು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಅವರು ಹೇಳಿದರು. ಅದಕ್ಕೆ ಉತ್ತರಿಸಿದ ನಾನು, ಅಲ್ಲಿ ಹಲವು ಘೋಷಣೆಗಳನ್ನು ಕೂಗಿದರು. ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ನನ್ನ ಕಿವಿಗೆ ಬಿದ್ದಿಲ್ಲ. ಅದು ಏನೇ ಆಗಿದ್ದರೂ ತನಿಖೆ ನಡೆಸುವಂತೆ ಪೊಲೀಸರನ್ನು ಕೇಳುತ್ತೇನೆ. ಅವರು ತನಿಖೆ ನಡೆಸಲಿ’ ಎಂದು ವಿಡಿಯೊದಲ್ಲಿ ನಾಸಿರ್ ಹುಸೇನ್ ಹೇಳಿದ್ದಾರೆ.

ADVERTISEMENT

‘ಒಂದೊಮ್ಮೆ, ಆ ರೀತಿಯ ಘೋಷಣೆ ಕೂಗಿದ್ದರೆ, ಅಂತಹವರ ವಿರುದ್ಧ ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯ ಮತ್ತು ಕಠಿಣ ಕ್ರಮ ಜರುಗಿಸಬೇಕು. ಅದಕ್ಕೊಂದು ತನಿಖೆ ನಡೆಯಬೇಕು. ಒಂದೊಮ್ಮೆ ತಿರುಚಿದ ವಿಡಿಯೊ ಪ್ರಸಾರ ಮಾಡಿ ಕಿಡಿಗೇಡಿತನ ಎಸಗಿದ್ದರೆ ಆ ಬಗ್ಗೆಯೂ ತನಿಖೆ ನಡೆಯಬೇಕು. ಯಾರಾದರೂ ಘೋಷಣೆ ಕೂಗಿದ್ದರೆ, ಆ ವ್ಯಕ್ತಿ ಯಾರು? ಎಲ್ಲಿಯವನು? ಮತ್ತು ಆತ ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದು ಹೇಗೆ? ಆ ರೀತಿ ಘೋಷಣೆ ಕೂಗುವುದರ ಹಿಂದಿನ ಉದ್ದೇಶವೇನು? ಎಂಬ ಬಗ್ಗೆಯೂ ತನಿಖೆ ಆಗಬೇಕು’ ಎಂದೂ ಹೇಳಿದ್ದಾರೆ.

‘ನನ್ನ ಗಮನಕ್ಕೆ ಬಂದ ಹಾಗೆ ಆ ಸ್ಥಳದಲ್ಲಿ ಆ ರೀತಿಯ ಯಾವುದೇ ಘೋಷಣೆ ಕೂಗಲಾಗಿಲ್ಲ. ಒಂದೊಮ್ಮೆ, ನನ್ನ ಸಮ್ಮುಖದಲ್ಲಿ ಯಾರಾದರೂ ಅಂತಹ ಘೋಷಣೆ ಕೂಗಿದ್ದರೆ ಸುಮ್ಮನಿರುವ ಅವಿವೇಕಿ ನಾನಲ್ಲ, ಒಬ್ಬ ಭಾರತೀಯ ಪ್ರಜೆಯಾಗಿ ಅಂತಹುದ್ದನ್ನು ಸಹಿಸುವುದಿಲ್ಲ. ಹಾಗಾಗಿ, ತನಿಖೆ ನಡೆಯುವವರೆಗೂ ಕಾಯೋಣ’ ಎಂದಿದ್ದಾರೆ.

ಏನಿದು ಪ್ರಕರಣ?

ರಾಜ್ಯಸಭೆ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆ ವೇಳೆ ಮಂಗಳವಾರ ವಿಧಾನಸೌಧ ಕಾರಿಡಾರ್‌ನಲ್ಲಿ ಕಿಡಿಗೇಡಿ ಯೊಬ್ಬ ‘ಪಾಕಿಸ್ತಾನ್ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿ ಸೈಯದ್ ನಾಸಿರ್‌ ಹುಸೇನ್‌ ಅವರ ಫಲಿತಾಂಶ ಹೊರಬೀಳುತ್ತಿದ್ದಂತೆ ಅವರ ಅಭಿಪ್ರಾಯ ತೆಗೆದುಕೊಳ್ಳಲು ವಿದ್ಯುನ್ಮಾನ ಮಾಧ್ಯಮದವರು ಕ್ಯಾಮೆರಾ ಹಿಡಿದಿದ್ದರು. ಆಗ ನಾಸಿರ್ ಅವರ ಹಿಂದಿದ್ದ ಕೆಲವರು ‘ನಾಸೀರ್ ಸಾಬ್ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದರು. ಅದರ ಬೆನ್ನಲ್ಲೇ, ಜೋರಾಗಿ ‘ಪಾಕಿಸ್ತಾನ್ ಜಿಂದಾಬಾದ್‌’ ಎಂಬ ಘೋಷಣೆಯೂ ಕೇಳಿಸಿತು. ಹೀಗೆ ಕೂಗಿದಾತ, ಆ ಕ್ಷಣವೇ ಅಲ್ಲಿಂದ ನಾಪತ್ತೆಯಾದ ಎಂದು ದೂರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈಯದ್ ನಾಸಿರ್‌ ಹುಸೇನ್‌, ‘ಕರ್ನಾಟಕ ಜಿಂದಾಬಾದ್‌, ನಾಸಿರ್‌ ಹುಸೇನ್‌ ಜಿಂದಾಬಾದ್‌ ಎಂಬ ಘೋಷಣೆ ಯನ್ನಷ್ಟೇ ನಾನು ಕೇಳಿದ್ದೇನೆ. ಪಾಕಿಸ್ತಾನ್‌ ಜಿಂದಾಬಾದ್‌ ಎಂಬ ಘೋಷಣೆ ನಾನು ಕೇಳಿಲ್ಲ’ ಎಂದರು.

‘ಆ ರೀತಿ ಕೂಗಿರುವುದು ನನಗೆ ಕೇಳಿಸಿಲ್ಲ. ಹಾಗೆ ಯಾರಾದರೂ ಘೋಷಣೆ ಕೂಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ’ ಎಂದೂ ಹೇಳಿದರು.

ಈ ಪ್ರಕರಣದ ಬೆನ್ನಲ್ಲೇ, ರಾತ್ರಿ ಎಂಟರ ಸುಮಾರಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದಲ್ಲಿ ವಿಧಾನಸೌಧ ಠಾಣೆಗೆ ತೆರಳಿದ ಬಿಜೆಪಿ ನಾಯಕರು, ಪ್ರತಿಭಟನೆ ನಡೆಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.