ADVERTISEMENT

ಇವರ ದರೋಡೆ ನಿಲ್ಲಿಸಲು ಮಿಲಿಟರಿ ಬರುವ ಕಾಲ ಬರುತ್ತದೆ: ಡಿಕೆಶಿಗೆ HDK ತಿರುಗೇಟು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 10:04 IST
Last Updated 21 ಜುಲೈ 2024, 10:04 IST
<div class="paragraphs"><p>ಡಿ.ಕೆ.ಶಿವಕುಮಾರ್, ಎಚ್‌.ಡಿ.ಕುಮಾರಸ್ವಾಮಿ</p></div>

ಡಿ.ಕೆ.ಶಿವಕುಮಾರ್, ಎಚ್‌.ಡಿ.ಕುಮಾರಸ್ವಾಮಿ

   

ಹಾಸನ: ಕುಮಾರಸ್ವಾಮಿ ಇಲ್ಲಿ ಏಕೆ ಬರುತ್ತಾರೆ. ಅವರು ಬಂದರೆ ಏನೂ ಪ್ರಯೋಜನವಾಗಲ್ಲ. ಮಿಲಿಟರಿ ಕರೆದುಕೊಂಡು ಬರಬೇಕಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಅವರು ಏಕೆ ಆ ರೀತಿ ಹೇಳಿಕೆ ಕೊಟ್ಟರು ಎಂದು ಯೋಚನೆ ಮಾಡಿದೆ. ದರೋಡೆ ಮಾಡುವುದನ್ನು ನಿಲ್ಲಿಸಲು ಮಿಲಿಟರಿ ಕರೆದುಕೊಂಡು ಬನ್ನಿ ಎಂದಿದ್ದಾರೆ. ಮಿಲಿಟರಿ ಬರುವ ಕಾಲ ಬರುತ್ತೆ, ಆಗ ಕರೆದುಕೊಂಡು ಬರೋಣ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

ಕುಮಾರಸ್ವಾಮಿ 39 ಸೀಟ್ ಗೆದ್ದರೂ, ಮುಖ್ಯಮಂತ್ರಿ ಮಾಡಿದ್ವಿ. ದೇವೇಗೌಡರು 16 ಸೀಟ್ ಗೆದ್ದರೂ ಪ್ರಧಾನಮಂತ್ರಿ ಮಾಡಿದ್ದೇವೆ ಎಂದು ಪಾಪ ಕನಕಪುರದವರು, ಬ್ರಾಂಡ್ ಬೆಂಗಳೂರು ಮಾಡುವವರು ಹೇಳುತ್ತಿದ್ದಾರೆ. ಆದರೆ ಸರ್ಕಾರವನ್ನು ತೆಗೆದವರು ಯಾರು ಎಂದು ಹೇಳಬೇಕಲ್ವ ಎಂದು ಪ್ರಶ್ನಿಸಿದರು.

ನಿಮ್ಮ ಮನೆ ಬಾಗಿಲಿಗೆ ನಾನು, ದೇವೇಗೌಡರು ಬಂದಿದ್ವಾ? ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು ಕಮ್ಯುನಿಸ್ಟ್‌ ಹಾಗೂ ಇತರರು. ಒಬ್ಬ ಕನ್ನಡಿಗನನ್ನು ತೆಗೆದವರು ಯಾರು? ನಾನು ಏನು ತಪ್ಪು ಮಾಡಿದೆ ಎಂದು ಸರ್ಕಾರ ತೆಗೆದರು ಎಂದು ಕೇಳಿದರು.

ದಲಿತರು ಎಂದು ಕರೆಯಬೇಡಿ ಎಂದು ಚರ್ಚೆ ನಡೆದಿದೆ. ಎಷ್ಟು ವರ್ಷದಿಂದ ಅಹಿಂದ ಎಂದು ಹೆಸರು ಇಟ್ಟುಕೊಂಡಿದ್ದೀರಾ? ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರಿ. ಅವರಿಗೆ ಮೀಸಲಿಟ್ಟಿದ್ದ ಹಣ ಉಪಯೋಗಿಸಿ ಕೊಂಡಿದ್ದೀರಿ. ದಾನ-ಧರ್ಮ ಮಾಡಿ ಬಂದವರಂತೆ ಇವರು. ಬಹಳ ನೀತಿವಂತರು ಇವರು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕೈಕಾಲು ನಡುಕ:

ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಮತ್ತು ಧರ್ಮ. ನಾನು ರಾಜ್ಯಕ್ಕೆ ಬರುತ್ತೇನೆ ಎಂದರೆ ಅವರಿಗೆ ಕೈಕಾಲು ನಡುಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಕರ್ನಾಟಕಕ್ಕೆ ನಾನು ಬರುವುದನ್ನೇ ಸಹಿಸಲ್ಲ ಎಂದರೆ ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ? ನಾನು ಬರಲೇಬಾರದು ಎನ್ನುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮಂಡ್ಯಕ್ಕೆ ಹೋದರೂ ಬೇಡ ಎನ್ನುತ್ತಾರೆ. ಉತ್ತರ ಕರ್ನಾಟಕ ಹೋಗ್ತೀನಿ ಎಂದರೂ ಬೇಡ ಎನ್ನುತ್ತಾರೆ. ಸದ್ಯ ಹಾಸನಕ್ಕೆ ಬರಬೇಡಿ ಅನ್ನಲಿಲ್ಲ ಎಂದು ಲೇವಡಿ ಮಾಡಿದರು.

ನಾನು ಡಿಪ್ರೆಷನ್‌ನಲ್ಲಿ ಇರುವಂತೆ ಕಾಣುತ್ತೇನೆ ಎಂದು ಹೇಳಿದ್ದಾರೆ. ಆ ರೀತಿ ಕಾಣುತ್ತೇನಾ? ನನಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವುದು, ಒಳ್ಳೆಯ ಖಾತೆಗಳು ಸಿಕ್ಕಿರುವುದನ್ನು ನೋಡಿ, ಅವರಿಗೇ ಡಿಪ್ರೆಷನ್‌ ಆಗಿದೆ ಎಂದು ತಿರುಗೇಟು ನೀಡಿದರು.

ನಾನು, ಅಶೋಕ್ ಒಟ್ಟಿಗೆ ಬಂದಿದ್ದೇವೆ. ಇಲ್ಲಿ ಜಿಲ್ಲಾಡಳಿತ ಸೂಕ್ಷ್ಮವಾಗಿ ನೋಡಲು ಸ್ವಲ್ಪ ಸಹಕಾರ ಕೊಟ್ಟಿದ್ದಾರೆ. ನಿನ್ನೆ ಐದು ಕಿಲೋಮೀಟರ್ ಹಿಂದೆಯೇ ತಡೆಗೋಡೆ ಇಟ್ಟು, ಏನೂ ಚಿತ್ರೀಕರಣ ಮಾಡದ ರೀತಿ ಆದೇಶ ಮಾಡಿದ್ದರು. ನಾನು ಯಾರನ್ನೂ ಟೀಕೆ ಮಾಡಲು ಹೋಗಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು ಎಂದರು.

ಯಾವ ಸರ್ಕಾರವೂ ₹10 ಲಕ್ಷ ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂಬ ಸಚಿವ ಮಂಕಾಳ ವೈದ್ಯ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಅವರಿಗೆ ಸಮಯ ಸಿಕ್ಕಿದರೆ ಕೊಡಗಿಗೆ ಭೇಟಿ ನೀಡಲಿ. ನನ್ನ ಕಾಲದಲ್ಲಿ ಸಂತ್ರಸ್ತರಿಗೆ ₹10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದೇವೆ. ₹1 ಲಕ್ಷ ಪರಿಹಾರ ಕೊಟ್ಟಿದ್ದೇವೆ. ₹50 ಸಾವಿರ ಪದಾರ್ಥ ಕೊಳ್ಳಲು ಕೊಟ್ಟಿದ್ದೇವೆ. ಗೊತ್ತಿಲ್ಲದೆ ಹೋದರೆ ಹೋಗಿ ನೋಡಿಕೊಂಡು ಬರಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.