ADVERTISEMENT

30.68 ಲಕ್ಷ ಜನರಿಗೆ ಲಸಿಕೆ: ರಾಜ್ಯ ನಂ. 1

ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಹೊಸ ಸಾಧನೆ– ಸಚಿವ ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 17:01 IST
Last Updated 18 ಸೆಪ್ಟೆಂಬರ್ 2021, 17:01 IST
ಕೆ. ಸುಧಾಕರ್
ಕೆ. ಸುಧಾಕರ್   

ಬೆಂಗಳೂರು: ‘ರಾಜ್ಯದಲ್ಲಿ ಶುಕ್ರವಾರ (ಸೆ. 17) ನಡೆದ ಲಸಿಕೆ ಅಭಿಯಾನದಲ್ಲಿ 30.68 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇದು ಇಡೀ ದೇಶದಲ್ಲಿ ನೀಡಿದ ಒಟ್ಟು ಲಸಿಕೆಯಲ್ಲಿ ಶೇ 11ರಷ್ಟು ರಾಜ್ಯದಲ್ಲಿ ನೀಡಲಾಗಿದೆ. ಆ ಮೂಲಕ, ಕರ್ನಾಟಕ ಹೊಸ ಸಾಧನೆ ಮಾಡಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಚಿವರು, ‘ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ಲಸಿಕೆ ನೀಡುವ ಮೂಲಕ ರಾಜ್ಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿತ್ತು. ಒಂದೇ ದಿನ 30 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು’ ಎಂದರು.

‘ಇಡೀ ದೇಶದಲ್ಲಿ ಅತಿ ಹೆಚ್ಚು ಲಸಿಕೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ (4.09 ಲಕ್ಷ) ನೀಡಲಾಗಿದೆ. ಬೆಳಗಾವಿಯಲ್ಲಿ 2.57 ಲಕ್ಷ ಲಸಿಕೆ ನೀಡಲಾಗಿದೆ. ಜಿಲ್ಲಾಮಟ್ಟದ ಸಾಧನೆಯಲ್ಲಿ ಎರಡು ಸ್ಥಾನಗಳು ರಾಜ್ಯಕ್ಕೆ ಬಂದಿವೆ. ಒಟ್ಟು 14.96 ಲಕ್ಷ ಮಹಿಳೆಯರು ಲಸಿಕೆ ಪಡೆದಿದ್ದು, ಪುರುಷರಿಗಿಂತ (14.53 ಲಕ್ಷ) ಮುಂದಿದ್ದಾರೆ. ಈವರೆಗೆ 5 ಕೋಟಿ ಲಸಿಕೆ ನೀಡಿದ್ದು, ಕಳೆದ 20 ದಿನಗಳಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. 1 ಕೋಟಿ ಜನರಿಗೆ ಎರಡೂ ಡೋಸ್ ನೀಡಲಾಗಿದೆ’ ಎಂದರು.

ADVERTISEMENT

‘ಲಸಿಕೆ ನೀಡಿಕೆಯಲ್ಲಿ ಕಲಬುರ್ಗಿ ಶೇ 41, ಕೊಪ್ಪಳ ಶೇ 62, ಉಡುಪಿ ಶೇ 63, ಬೆಂಗಳೂರು ನಗರ ಶೇ 143, ಶಿವಮೊಗ್ಗ ಶೇ 134, ಧಾರವಾಡ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ ತಲಾ ಶೇ 120 ಸಾಧನೆ ಮಾಡಿವೆ’ ಎಂದರು.

ರಕ್ತ ಸಂಗ್ರಹ, ಅಂಗಾಂಗ ದಾನ: ‘ರಾಜ್ಯದಾದ್ಯಂತ ನಡೆದ ರಕ್ತದಾನ ಶಿಬಿರದಲ್ಲಿ 5,201 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಬಿಬಿಎಂಪಿಯಲ್ಲಿ 1,240 ಯುನಿಟ್, ಬಳ್ಳಾರಿಯಲ್ಲಿ 298, ದಕ್ಷಿಣ ಕನ್ನಡದಲ್ಲಿ 295 ಯುನಿಟ್ ಸಂಗ್ರಹವಾಗಿದೆ. ಎರಡು ವಾರಗಳಲ್ಲಿ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸಬೇಕೆಂಬ ಗುರಿ ಹೊಂದಲಾಗಿದೆ’ ಎಂದರು.

‘ಅಂಗಾಂಗ ಕಸಿಗೂ ದಾನ ಹೆಚ್ಚಬೇಕಿದೆ. ಇದಕ್ಕಾಗಿ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ದಾನ ವಿಭಾಗ ಆರಂಭಿಸಲು ತೀರ್ಮಾನಿಸಲಾಗಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಪ್ರತಿ ಕುಟುಂಬಕ್ಕೆ ನೀಡಲು ಮೂರು ತಿಂಗಳ ಗುರಿ ನೀಡಲಾಗಿದೆ’ ಎಂದರು.

ವಿಷನ್ ವರದಿ: ‘250 ತಜ್ಞರು ರೂಪಿಸಿದ ಆರೋಗ್ಯ ವಲಯದ ವಿಷನ್ ವರದಿಯನ್ನು ಮುಖ್ಯಮಂತ್ರಿ ಮೂಲಕ ಪ್ರಧಾನಿಗೆ ನೀಡಿ ಚಾಲನೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.