‘ಸಂಬಂಧ ಎಂಬ ಪದದಲ್ಲಿ, ಯಾವ ಅಕ್ಷರಕ್ಕೆ ಬಾಲ ಬಳಿಯಬೇಕೆಂಬುದನ್ನು ತಿಳಿದಿರದಿದ್ದ ಇವನನ್ನು ತಿದ್ದಿ, ಕನ್ನಡದ ಉತ್ತಮ ಕತೆಗಾರರಲ್ಲೊಬ್ಬನನ್ನಾಗಿ ರೂಪಿಸಿದವನು ನಾನು ಎಂದು ಹಕ್ಕು ಸ್ಥಾಪಿಸಿದ್ದವರು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು.’
ಇದು ನಾನು ಈಗಾಗಲೇ ಬರೆದು ಮುಗಿಸಿರುವ ಆದರೆ, ಇನ್ನೂ ಪ್ರಕಟಿಸದಿರುವ ‘ನನ್ನ ಕರ್ಮ ಕತೆ’ಯ ಮೊದಲ ಸಾಲು.
‘ಅಪ್ಪ ಇದೀಗಷ್ಟೇ ಹೋಗಿಬಿಟ್ಟರು’ ಅಂತ ವೀಣಾ ಫೋನ್ ಮಾಡಿದಾಗ, ‘ಕನ್ನಡ ಸಾಹಿತ್ಯ’ಕ್ಕೆ ತುಂಬಲಾರದ ನಷ್ಟವಾಯಿತು’ ಅಂತನೋ ಹೇಳಲಿಲ್ಲ. ಯಾಕೆಂದರೆ, ನಷ್ಟವಾದದ್ದು ಸಾಹಿತ್ಯಕ್ಕಲ್ಲ; ನನಗೆ.
ಪುರುಷಸೂಕ್ತ, ಶ್ರೀಮದ್ಭಗವದ್ಗೀತೆ, ಶ್ರೀಸೂಕ್ತ, ಶಿವಸೂಕ್ತ, ನರಸಿಂಹಸ್ತುತಿ, ತಂತ್ರಸಾರ ಸಂಗ್ರಹ, ಮಾಧ್ವರಾಮಾಯಣ, ಮಂಗಲಾಷ್ಟಕ, ಆನಂದಮಾಲಾ, ವಾಯುಸ್ತುತಿ, ವಿಷ್ಣುಸ್ತುತಿ, ಭಾಗವತತಾತ್ಪರ್ಯ ಇತ್ಯಾದಿ ಧರ್ಮಗ್ರಂಥಗಳ ಟಿಪ್ಪಣಿಗಳಿಗೇ ತಮ್ಮ ಸಮಯ
ವನ್ನು ಅವರು ಮೀಸಲಿಡದಿರುತ್ತಿದ್ದರೆ, ಇಂದು ಕನ್ನಡ ಸಾಹಿತ್ಯಕ್ಕೆ ‘ತುಂಬಲಾರದ ನಷ್ಟ’ ಎಂಬ ಕ್ಲೀಷೆಗೆ ಪಾತ್ರವಾಗುತ್ತಿದ್ದರೇನೋ. ಈ ಸಾಹಿತ್ಯಿಕ ತಮಾಷೆಗೂ ಬನ್ನಂಜೆಯವರೇ ನೇರ ಕಾರಣ.
ಅಥವಾ ಪೇಜಾವರ ಮಠವು ‘ಶ್ರೀಕೃಷ್ಣಾನುಗ್ರಹ ಪ್ರಶಸ್ತಿ’ಯಿಂದ ಬನ್ನಂಜೆಯವರನ್ನು ಆಶೀರ್ವದಿಸಿದ್ದು, ಅದಮಾರು ಪೀಠವು ‘ವಿದ್ಯಾವಾಚಸ್ಪತಿ’ ಎಂಬ ಕಿರೀಟ ತೊಡಿಸಿದ್ದು, ಫಲಿಮಾರು ಮಠವು ‘ಪ್ರತಿಭಾಂಬುದಿ’ ಎಂಬ ಬಿರುದು ನೀಡಿದ್ದು, ಅಖಿಲ ಭಾರತ ಮಾಧ್ವ ಮಹಾಮಂಡಲವು ‘ಶಾಸ್ತ್ರ ಸವ್ಯಸಾಚಿ’ ಎಂದು ಪುರಸ್ಕರಿಸಿದ್ದು, ಸಂಶೋಧನ ವಿಚಕ್ಷಣ, ಪಂಡಿತಶಿರೋಮಣಿ, ಪಂಡಿತರತ್ನ, ವಿದ್ಯಾರತ್ನಾಕರ ಇತ್ಯಾದಿ ಹೆಸರುಗಳಿಂದ ಧರ್ಮಪೀಠಗಳು ಕರೆದದ್ದೇ, ಸಾಹಿತ್ಯ ವಿಮರ್ಶಕರುಗಳಿಗೆ ಅಪಥ್ಯವಾಗಿದ್ದಿರಬಹುದೆ? ಈ ಕಾರಣಗಳಿಂದಲೇ ರೋಸಿ ಹೋದ ಬನ್ನಂಜೆಯವರು, ‘ಆವೆಯ ಮಣ್ಣಿನ ಆಟದ ಬಂಡಿ’ಯಂತಹ ಕೃತಿಗಳನ್ನು ಬರೆಯುವುದನ್ನೇ ನಿಲ್ಲಿಸಿ
ದರೆ? ಯಾಕೆಂದರೆ, ಬನ್ನಂಜೆಯವರು ಬರೆದುದಕ್ಕಿಂತಲೂ ಬರೆಯದೇ ಉಳಿಸಿದ್ದೇ ಹೆಚ್ಚು.
ಉದಾಹರಣೆಗೆ, ನಾಲ್ಕು ದಶಕಗಳಿಗೂ ಹಿಂದೊಮ್ಮೆ, ಉದಯವಾಣಿ ಕಚೇರಿಯಲ್ಲಿ ಅವರ ಜೊತೆಗೆ ಕುಳಿತಿದ್ದಾಗ ಬಂದಿದ್ದ ಹಿರಿಯರೊಬ್ಬರು ವಿಜಯೋತ್ಸಾಹದಿಂದ, ‘ಇನ್ನೆಂತ ಬಾಕಿ ಉಂಟು ಬನ್ನಂಜೆಯವರೇ. ದ್ರೋಣ ಹುಟ್ಟಿದ್ದು ಹೇಗೆ ಅಂತ ಗಾಳಿಗೆ ಹಿಡಿಯುತ್ತಿದ್ದವರ ಬಾಯಿ ಬಂದಾಯಿತಲ್ಲಾ? ಟೆಸ್ಟ್ ಟ್ಯೂಬ್ ಬೇಬಿಯ ಸೃಷ್ಟಿ ಕರ್ತರೂ ನಾವೇ ಅಂತ ಈಗ ಜಗಜ್ಜಾಹೀರಾಯಿತಲ್ಲಾ?’ ಎಂದಿದ್ದರು. ಆಗ, ‘ಅವಸರ ಬೇಡ ಭಟ್ರೇ. ಟೆಸ್ಟ್ ಟ್ಯೂಬ್ ಬೇಬಿ ಇನ್ನೂ ಪ್ರಯೋಗದ ಹಂತದಲ್ಲಿದೆ. ಒಂದು ವೇಳೆ ಅದು ಸಕ್ಸೆಸ್ ಆಗದೇ ಹೋದರೆ, ದ್ರೋಣರ ಕತೆಯೂ ಫೇಲ್ ಆಗಿಬಿಟ್ಟೀತು. ಯಾರಲ್ಲೂ ಹೀಗೆಲ್ಲ ಹೇಳಲು ಹೋಗಬೇಡಿ’ ಎಂದು ನಕ್ಕಿದ್ದವರು ಬನ್ನಂಜೆಯವರು.
ಇದನ್ನೂ ಓದಿ: ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
ಬನ್ನಂಜೆಯವರನ್ನು ಅರ್ಥ ಮಾಡಿಕೊಂಡದ್ದು ‘ಅವರ’ ಬರಹಗಳಿಂದಲ್ಲ; ‘ನನ್ನ’ ಬದುಕಿನಿಂದ. ಅವರನ್ನು ನಾನಾಗಲೀ, ನನ್ನನ್ನು ಆವರಾ
ಗಲೀ ಜೀವಂತವಾಗಿ ಕಾಣುವುದಕ್ಕಿಂತ ಬಲು ಹಿಂದೆಯೇ ಅವರಿಗೆ ನನ್ನ ಮೇಲೆ ಅದೆಷ್ಟು ಪ್ರೀತಿ ವಿಶ್ವಾಸಗಳಿದ್ದವು ಎಂಬು
ದಕ್ಕೆ, 1997ರ ಮಾರ್ಚ್ 26ರಂದು ನನಗೆ ಬರೆದಿದ್ದ ಆದರೆ, ಅವರೆಲ್ಲಿಯೂ ‘ಹೇಳದೆ ಉಳಿದಿದ್ದ’ ಒಂದು ಪತ್ರದ ಈ ಕೆಳಗಿನ ಸಾಲುಗಳೇ ಸಾಕ್ಷಿ.
‘ತುಷಾರಕ್ಕೆಂದು ನೀವು ಬರೆದು ಕಳಿಸಿದ್ದ, ವಿಚಾರ ಪತ್ರ’ ಓದಿದೆ. ಕನ್ನಡಿಯಂತೆ ಪಾರದರ್ಶಕವಾಗಿ ನಿಮ್ಮ ಹೃದಯ
ವನ್ನು ತೆರೆದಿಟ್ಟು ನೀವು ಬರೆಯಬಲ್ಲಿರಿ. ಪತ್ರ ಚೆನ್ನಾಗಿತ್ತು. ಚುರುಕಾಗಿತ್ತು. ಸಮಾಜ ವಾತಾವರಣ ಎಲ್ಲವನ್ನೂ ಮರೆತು, ತಟಸ್ಥವಾಗಿ ಡಿಟ್ಯಾಚ್ಡ್ ಆಗಿ, ವಸ್ತುನಿಷ್ಠವಾಗಿ ನೀವು ವಿಷಯಗಳನ್ನು ಕಾಣಬಲ್ಲಿರಿ. ಇದು ಒಂದು ಅಪರೂಪದ ಗುಣ. ಇದನ್ನು ಉಳಿಸಿಕೊಳ್ಳಿ. ಬೆಳೆಸಿಕೊಳ್ಳಿ. ಆದರೆ, ತುಷಾರ ನಿಮ್ಮ ಈ ಪತ್ರವನ್ನು ಪ್ರಕಟಿಸುವಂತಿಲ್ಲ. ಕಾರಣ ನಿಮಗೂ ಗೊತ್ತು. ಪತ್ರಿಕೆಯವರೆಂದರೆ .... ಇದ್ದಂತೆ. ದುಡ್ಡು ಕೊಟ್ಟವರೆಲ್ಲರೂ ಅದರ ಧನಿಗಳು. ಎಲ್ಲರನ್ನೂ ಪ್ಲೀಸ್ ಮಾಡುವ ಮುಖವಾಡ ಹೊತ್ತೇ ಬದುಕುವುದು ಅದರ ಜಾಯಮಾನ.’
ಐದು ದಶಕಗಳ ಹಿಂದೆ, ಪುತ್ತೂರಿನ ಕೆಲವು ಗಲ್ಲಿಗಳಲ್ಲಿ ಕತೆಗಾರನೆಂದು ಜಗತ್ಪ್ರಸಿದ್ಧನಾಗಿದ್ದ ನನಗೆ ಉಡುಪಿಗೆ ವರ್ಗಾವಣೆಯಾದಾಗ, ಬಾಡಿಗೆಮನೆ ನೀಡುವ ಹೃದಯವಂತರು ಉಡುಪಿಯಲ್ಲಿದ್ದಿರಲಿಲ್ಲ. ಆ ಸಂದಿಗ್ಧ ಸಂದರ್ಭದಲ್ಲಿ ನನ್ನ ಜನನ ದಾಖಲೆಯ ತಲೆ ಬಾಲಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಬನ್ನಂಜೆಯವರು, ಯಾರ್ಯಾರಿಗೋ ದುಂಬಾಲು ಬಿದ್ದು ಕೊನೆಗೂ ನನಗೊಂದು ಬಾಡಿಗೆ ಮನೆ ಕೊಡಿಸಿ ‘ಅನಿಕೇತನ’ನಾಗುವುದರಿಂದ ನನ್ನನ್ನು ಬಚಾವು ಮಾಡಿದ್ದರು. ಈಗ ನಾನು ಮತ್ತೊಮ್ಮೆ ಉಡುಪಿಗೆ ಹೋದರೆ, ಬಾಡಿಗೆಮನೆ ಕೊಡುವವರೂ ಇಲ್ಲ, ಕೊಡಿಸುವವರೂ ಇಲ್ಲ.ರಾಷ್ಟ್ರಪತಿಯನ್ನೇ ಕರೆಸದೆ ರಾಷ್ಟ್ರಭವನಕ್ಕೆ ಕಲ್ಲು ಹಾಕುವಂತಹ ದೇಶದಲ್ಲಿ, ಬನ್ನಂಜೆಯವರಂತಹ ಸಂತನೂ ಬದುಕಿದ್ದ ಎಂಬುದೇ ಒಂದು ವಿಸ್ಮಯ. ಬನ್ನಂಜೆಯವರ ನಿಧನದಿಂದ ನಷ್ಟವಾಗಿರುವುದು ಕನ್ನಡ ಸಾಹಿತ್ಯಕ್ಕೂ ಅಲ್ಲ, ಉಡುಪಿ ಮಠಗಳಿಗೂ ಅಲ್ಲ. ಈ ಸಾಹಿತ್ಯ.., ಈ ತುಂಬಲಾರದ.., ಈ ಆತ್ಮ.., ಈ ಶಾಂತಿ.. ಇತ್ಯಾದಿಗಳೆಲ್ಲವೂ ಕೇವಲ ಮುದ್ರಿತ ಅಕ್ಷರಗಳು. ಅವರ ಸಾವಿನಿಂದ ನಿಜವಾಗಿಯೂ ನಷ್ಟವಾಗಿರುವುದು ವಿನಯಾ, ವಿದ್ಯಾ, ಶುಭಾ, ವೀಣಾ, ಕವಿತಾ ಜೊತೆಗೆ ನನಗೆ ಮತ್ತು ಜುಬೇದಾಳಿಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.