ADVERTISEMENT

ಹೊರಗುತ್ತಿಗೆ ಸಿಬ್ಬಂದಿ ಮುಷ್ಕರ ಆರಂಭ

ಬೇಡಿಕೆ ಈಡೇರಿಸಲು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 23:35 IST
Last Updated 29 ಜುಲೈ 2024, 23:35 IST
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ,  ನಿವೃತ್ತರಿಗೆ ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಹಾಸ್ಟೆಲ್ ಹಾಗೂ ವಸತಿ ಶಾಲೆ–ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಸಿಬ್ಬಂದಿ, ಲಿಖಿತದ ಆದೇಶ ಹೊರಡಿಸುವ ತನಕ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ ಅಡಿಯಲ್ಲಿ ಸೇರ್ಪಡೆ ಮಾಡಬೇಕು. ಕನಿಷ್ಠ ವೇತನ ತಿಂಗಳಿಗೆ ₹31 ಸಾವಿರ ಪಾವತಿಸಬೇಕು. ಕಾರ್ಮಿಕರ ಕಾನೂನು ಪ್ರಕಾರ ವಾರದ ರಜೆ ಕಡ್ಡಾಯವಾಗಿ ನೀಡಬೇಕು. ಕೆಲಸದ ಸಮಯ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರತಿ ತಿಂಗಳ 5ರಂದು ಸಂಬಳ ಪಾವತಿಸಬೇಕು. ಬಾಕಿಯಿರುವ ಸಂಬಳವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್‌ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಸಿಬ್ಬಂದಿ ಒತ್ತಾಯಿಸಿದರು.

ಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದುಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮತ್ತೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಬೇಡಿಕೆ ಇರಿಸಿದರು.

ಅಡುಗೆ ಕೊಠಡಿಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಅಗತ್ಯ ಸಲಕರಣೆ ಕೊಡಬೇಕು. ಬಿಸಿಎಂ ಬಾಲಕರ ಹಾಸ್ಟೆಲ್‌ಗಳಿಗೆ ಹಿಂದಿನಂತೆ ರಾತ್ರಿ ಕಾವಲುಗಾರರ ನೇಮಕ ಮಾಡಬೇಕು. ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರಿಂದ ಶೌಚಾಲಯ ಸ್ವಚ್ಛ ಮಾಡಿಸಬಾರದು. ಹೊಸದಾಗಿ ಪ್ರಾರಂಭ ಮಾಡುವ ವಸತಿ ನಿಲಯಗಳ ಸಿಬ್ಬಂದಿ ಆಯ್ಕೆಗೆ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ನಿತ್ಯಾನಂದಸ್ವಾಮಿ, ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಖಜಾಂಚಿ ಚಂದ್ರಪ್ಪ ಹೊಸ್ಕೇರಾ ಹಾಜರಿದ್ದರು.

ವಸತಿ ಸೌಲಭ್ಯಕ್ಕಾಗಿ ತಮಟೆ ಚಳವಳಿ

ಬೆಂಗಳೂರು: ವಸತಿ ಸೌಲಭ್ಯ ಹಾಗೂ ಹಕ್ಕುಪತ್ರ ವಿತರಣೆ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಂಬೇಡ್ಕರ್‌ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ತಮಟೆ ಚಳವಳಿ ನಡೆಯಿತು.‌

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ಶೀಘ್ರದಲ್ಲೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.‌

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೊಡಿಗೆಹಳ್ಳಿ ಕೆರೆ ಅಂಗಳದಲ್ಲಿ 188 ಕುಟುಂಬಗಳು ನೆಲೆಸಿವೆ. ಆ ಕುಟುಂಬಗಳನ್ನು ಯಲಹಂಕ ತಾಲ್ಲೂಕಿನ ಚಿಕ್ಕಬೆಟ್ಟಹಳ್ಳಿ ಗ್ರಾಮದ ಸರ್ವೇ ನಂಬರ್ 49ಕ್ಕೆ ಸ್ಥಳಾಂತರಿಸಿ ವಸತಿ ಕಲ್ಪಿಸಬೇಕು. ಥಣಿಸಂದ್ರ ರಾಚೇನಹಳ್ಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಅವರನ್ನು ಯಲಹಂಕ ತಾಲ್ಲೂಕಿನ ಉತ್ತನಹಳ್ಳಿಗೆ ಸ್ಥಳಾಂತರಿಸಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಕೋರಿದರು.

ಸರ್ವಜ್ಞನಗರ ಕ್ಷೇತ್ರದ ನಾಗವಾರದ ವೀರಣ್ಯಪಾಳ್ಯ ಇಂದಿರಾ ಕ್ಯಾಂಟೀನ್‌ ಎದುರು ಸಣ್ಣ ಶೆಡ್‌ ನಿರ್ಮಿಸಿಕೊಂಡು ಹಲವು ಕುಟುಂಬಗಳು ನೆಲೆಸಿವೆ. ಆ ಜಾಗವು  ವಾಸಕ್ಕೆ ಸೂಕ್ತವಾಗಿಲ್ಲ. ಎಲ್ಲ ಕುಟುಂಬಗಳನ್ನು ದಾಸನಪುರ ಹೋಬಳಿ ಕುಕ್ಕೇನಹಳ್ಳಿ ಗ್ರಾಮದ ಸರ್ವೇ ನಂಬರ್ 75ಕ್ಕೆ ಸ್ಥಳಾಂತರಿಸಿ, ವಸತಿ ಕಲ್ಪಿಸಬೇಕು ಎಂದು ಕೋರಿದರು.

ಯಶವಂತಪುರ ಹೋಬಳಿಯ ಕೆರೆಗುಡ್ಡದಹಳ್ಳಿ ಗ್ರಾಮದ ಸರ್ವೇ ನಂಬರ್ 3ರ 4 ಎಕರೆ 25 ಗುಂಟೆ ಜಾಗದಲ್ಲಿ ಸುಮಾರು 200 ಕುಟುಂಬಗಳು ನೆಲೆಸಿವೆ. ಅವರಿಗೆ ಅಕ್ರಮ–ಸಕ್ರಮ ಯೋಜನೆ ಅಡಿ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಕೋರಿದರು.

ಚಿಕ್ಕಬೆಟ್ಟಹಳ್ಳಿಯ 250 ಕುಟುಂಬಗಳು ಅರ್ಜಿ ಸಲ್ಲಿಸಿ ಹತ್ತು ವರ್ಷ ಕಳೆದರೂ ಹಕ್ಕುಪತ್ರ ವಿತರಣೆ ಆಗಿಲ್ಲ. ಕೂಡಲೇ ಹಕ್ಕುಪತ್ರ ವಿತರಣೆ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಗೌರವಾಧ್ಯಕ್ಷ ಮಾಯಣ್ಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎಂ.ಪ್ರಿಯಾ, ಉಪಾಧ್ಯಕ್ಷೆ ಕೆ.ಎನ್‌.ಮಂಜುಳಾ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟೇಶ್, ಉಪಾಧ್ಯಕ್ಷ ಡಿ.ವೆಂಕಟೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.