ADVERTISEMENT

ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ: ಎಂ.ಆರ್‌. ಕಾಂಬ್ಳೆ ನೇಮಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 19:17 IST
Last Updated 10 ಜುಲೈ 2023, 19:17 IST
ವಿಧಾನ ಸೌಧ
ವಿಧಾನ ಸೌಧ   

ಬೆಂಗಳೂರು: ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಕಾಂಬ್ಳೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಆರ್‌. ನಿರಂಜನ್‌ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನಿವೃತ್ತ ನಿರ್ದೇಶಕ ಪಿ. ಶಿವಶಂಕರ್ ಅವರನ್ನು ಆಯೋಗದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

ಸೀಮಾ ನಿರ್ಣಯ ಕಾರ್ಯವನ್ನು ನಾಲ್ಕು ವಾರಗಳ ಒಳಗೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಈ ಹಿಂದಿನ ಸರ್ಕಾರ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮಿನಾರಾಯಣ ಅವರ ಅಧ್ಯಕ್ಷತೆಯಲ್ಲಿ  ‌ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. ಸಿವಿಲ್‌ ನ್ಯಾಯಾಲಯದ ಅಧಿಕಾರ ಹೊಂದಿರುವ ಈ ಆಯೋಗವು, ಈ ಹಿಂದಿನ ಜನಗಣತಿ ಆಧರಿಸಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿಯನ್ನು ನಿರ್ಧರಿಸುವ ಜೊತೆಗೆ, ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕ್ಷೇತ್ರಗಳ ಜನಸಂಖ್ಯೆ ನಿರ್ಧರಿಸುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಮಾನ ಆಗಿರುವಂತೆ ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಚುನಾವಣಾ ಕ್ಷೇತ್ರಗಳು ಭೌಗೋಳಿಕವಾಗಿ ಸಮೀಪ ಪ್ರದೇಶಗಳನ್ನು ಒಳಗೊಂಡಿರುವುದನ್ನು ಖಚಿತಪಡಿಸಿಕೊಂಡು ಶಿಫಾರಸು ಮಾಡಬೇಕು. ಜೊತೆಗೆ, ಸರ್ಕಾರ ವಹಿಸುವ ಇತರ ಜವಾಬ್ದಾರಿಗಳನ್ನೂ ನಿರ್ವಹಿಸಬೇಕಿದೆ. ಎಂ. ಲಕ್ಷ್ಮಿನಾರಾಯಣ ಅಧ್ಯಕ್ಷತೆಯ ಆಯೋಗ ಈಗಾಗಲೇ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.