ADVERTISEMENT

NEET Scam | ಕೇಂದ್ರಕ್ಕೆ ರಾಜ್ಯ ಸರ್ಕಾರದ ಸಡ್ಡು

ನೀಟ್‌, ಒಂದು ರಾಷ್ಟ್ರ, ಒಂದು ಚುನಾವಣೆ ವಿರುದ್ಧ ನಿರ್ಣಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 0:11 IST
Last Updated 26 ಜುಲೈ 2024, 0:11 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನೀಟ್‌’, ‘ಒಂದು ರಾಷ್ಟ್ರ–ಒಂದು ಚುನಾವಣೆ’ ಮತ್ತು ‘ಕ್ಷೇತ್ರ ಪುನರ್‌ವಿಂಗಡಣೆ’ಯನ್ನು ವಿರೋಧಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದಿರುವ ರಾಜ್ಯ ಸರ್ಕಾರ, ಈ ಸಂಬಂಧ ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಸರ್ವಾನುಮತದ ನಿರ್ಣಯಗಳನ್ನು ಅಂಗೀಕರಿಸಿದೆ.

ADVERTISEMENT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಚರ್ಚೆಗೆ ಅವಕಾಶ ನೀಡದೇ ಇರುವ ಕ್ರಮ ವಿರೋಧಿಸಿ ವಿರೋಧಪಕ್ಷಗಳ ಧರಣಿ ಮತ್ತು ಪ್ರತಿಭಟನೆಯ ಮಧ್ಯೆಯೇ ಎರಡೂ ಸದನಗಳಲ್ಲಿ ನಿರ್ಣಯವನ್ನು ಮಂಡಿಸಲಾಯಿತು. 

ಇಡೀ ಅಧಿವೇಶನದ ಹೆಚ್ಚಿನ ಸಮಯವನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮುಡಾ ನಿವೇಶನ ಹಂಚಿಕೆ ಹಗರಣಗಳ ವಿವಾದವೇ ಕಬಳಿಸಿತ್ತು. ವಿರೋಧ ಪಕ್ಷಗಳ ಆರ್ಭಟದ ಮುಂದೆ ಆಡಳಿತಾರೂಢ ಕಾಂಗ್ರೆಸ್‌ ಮಂಕಾಗಿತ್ತು. ನಿಗದಿತ ಅವಧಿಗೆ ಕಲಾಪ ಮುಗಿಯುವುದಕ್ಕೆ ಒಂದು ದಿನ ಇರುವಾಗಲೇ, ಚರ್ಚೆಯ ದಿಕ್ಕನ್ನು ಬೇರೆಡೆಗೆ ತಿರುಗಿಸಲು ಮುಂದಾದ ಸರ್ಕಾರ, ಕೇಂದ್ರದ ವಿರುದ್ಧದ ಮೂರು ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಹೊಸ ಯತ್ನ ನಡೆಸಿತು. 

‘ಒಂದು ರಾಷ್ಟ್ರ ಮತ್ತು ಒಂದು ಚುನಾವಣೆ’ ವಿರೋಧಿಸಿ ಮಂಡಿಸಿದ ನಿರ್ಣಯಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು. 

‘ವಿರೋಧಪಕ್ಷಗಳು ಧರಣಿಯಲ್ಲಿ ಇರುವಾಗ ನಿರ್ಣಯ ಮಂಡಿಸುತ್ತಿರುವುದು ಸರಿಯಲ್ಲ. ಈ ಉದ್ದೇಶಕ್ಕಾಗಿ ವಿಶೇಷ ಅಧಿವೇಶನ ಕರೆದು, ವಿರೋಧ ಪಕ್ಷಗಳ ಸದಸ್ಯರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕಿತ್ತು. ಚರ್ಚೆಗೆ ನಾವು ಸಿದ್ಧರಿದ್ದೇವೆ. ಸರ್ಕಾರಕ್ಕೆ ಚರ್ಚೆಯೇ ಬೇಕಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.

ಕ್ಷೇತ್ರ ಪುನರ್ವಿಂಗಡಣೆ:

ಕ್ಷೇತ್ರ ಪುನರ್‌ವಿಂಗಡಣೆ ಕುರಿತ ನಿರ್ಣಯವನ್ನು ಮುಖ್ಯಮಂತ್ರಿ ಪರವಾಗಿ ವಿಧಾನಸಭೆಯಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ, ಪರಿಷತ್ತಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಡಿಸಿದರು.

‘ಲೋಕಸಭೆ ಮತ್ತು ವಿಧಾನಸಭೆ ಸ್ಥಾನವನ್ನು ಹೆಚ್ಚಿಸುವ ಸಂದರ್ಭದಲ್ಲಿ 2026 ಅಥವಾ ಅದರ ನಂತರ ನಡೆಸುವ ಹೊಸ ಜನಗಣತಿಯ ಜನಸಂಖ್ಯೆಯನ್ನು ಆಧರಿಸಿ ಮಾಡಬಾರದು. 1971ರ ಜನಗಣತಿಯನ್ನು ಆಧರಿಸಿಯೇ ಪ್ರತಿ ರಾಜ್ಯಗಳಿಗೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಬೇಕು’ ಎಂದು ನಿರ್ಣಯ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.