ನವದೆಹಲಿ/ಬೆಂಗಳೂರು: ಮೈತ್ರಿ ಸರ್ಕಾರ ಬೀಳಿಸಲು ಕೈಜೋಡಿಸಿ ಅನರ್ಹಗೊಂಡಿರುವ ಶಾಸಕರು ಲಾಭಕಟ್ಟಿನ ಹಾಗೂ ಪ್ರಭಾವಿ ಖಾತೆಗಳಿಗೆ ಪಟ್ಟು ಹಿಡಿದಿರುವುದು ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ದೂಡಿದೆ.
ಮುಖ್ಯಮಂತ್ರಿ ಗದ್ದುಗೆಗೇರಿದ ಬಳಿಕ ಸಂಪುಟ ವಿಸ್ತರಣೆ ಮಾಡಲು 25 ದಿನ ತೆಗೆದುಕೊಂಡ ಬಿ.ಎಸ್. ಯಡಿಯೂರಪ್ಪ ಅವರು, ಖಾತೆ ಹಂಚಿಕೆಯ ಸಂಕಟಕ್ಕೆ ಸಿಲುಕಿದ್ದಾರೆ. ಸಂಪುಟಕ್ಕೆ ಸೇರಿರುವ ಹಿರಿಯರು ಆಯಕಟ್ಟಿನ ಖಾತೆಗಳು ತಮಗೇ ಬೇಕು ಎಂದು ಹಟ ಹಿಡಿದಿದ್ದರೆ, ಸರ್ಕಾರ ಬೀಳಿಸುವ ಮುನ್ನ ವಾಗ್ದಾನ ಮಾಡಿದಂತೆ ಪ್ರಭಾವಿ ಖಾತೆಗಳನ್ನು ತಮಗಾಗಿ ಉಳಿಸಿಕೊಳ್ಳಲೇಬೇಕು ಎಂದು ಅನರ್ಹ ಶಾಸಕರು ಒತ್ತಡ ಹೇರುತ್ತಿದ್ದಾರೆ.
ಹಿಂದಿನ ಸಭಾಧ್ಯಕ್ಷರು ನೀಡಿದ್ದ ಅನರ್ಹತೆಯ ತೀರ್ಪಿನ ಮೇಲ್ಮನವಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಆರಂಭವಾಗದೇ ಇರುವುದು ಹಾಗೂ ಸಚಿವ ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂಬ ಭೀತಿಗೆ ತುತ್ತಾಗಿರುವ ಅನರ್ಹ ಶಾಸಕರು ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಮುನ್ನ ಆಶ್ವಾಸನೆ ನೀಡಲಾಗಿದ್ದ ಖಾತೆಗಳನ್ನು ಬಿಟ್ಟು ಮಿಕ್ಕ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಬೇಕು’ ಎಂಬ ವಾದ ಮಂಡಿಸುತ್ತಿದ್ದಾರೆ.
ಅಥಣಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಮಹೇಶ ಕುಮಠಳ್ಳಿ ರಾಜೀನಾಮೆ ನೀಡುವ ಮುನ್ನ ಅವರಿಗೆ ಸಚಿವ ಸ್ಥಾನದ ಭರವಸೆ ಕೊಡಲಾಗಿತ್ತು. ಅದೇ ಕ್ಷೇತ್ರದಿಂದ ಸೋತಿದ್ದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೊಟ್ಟಿರುವುದು ಅನರ್ಹರ ಆತಂಕಕ್ಕೆ ಕಾರಣ ಎನ್ನಲಾಗಿದೆ. ಇದೇ ವಿಷಯವನ್ನು ಮುಂದಿಟ್ಟಿರುವ ರಮೇಶ ಜಾರಕಿಹೊಳಿ, ‘ಕುಮಠಳ್ಳಿ ಭವಿಷ್ಯ ನಿರ್ಧರಿಸಿ’ ಎಂದು ಒತ್ತಡ ಹೇರುತ್ತಿದ್ದಾರೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡುವ ತಯಾರಿ ನಡೆಸಿರುವ ಅನರ್ಹರು, ಭವಿಷ್ಯವನ್ನು ಉಳಿಸಿಕೊಳ್ಳಲು ಶತಾಯಗತಾಯ ಯತ್ನ ನಡೆಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ, ಅನರ್ಹರ ಬೇಡಿಕೆಯನ್ನು ಶಾ ಮುಂದೆ ಮಂಡಿಸುವ ದಾರಿ ಹಿಡಿದಿದ್ದಾರೆ.
ಅತೃಪ್ತರ ಸಿಟ್ಟು: ಸಚಿವ ಸಿಗದೇ ಇರುವ ಅತೃಪ್ತರ ಸಂಖ್ಯೆ ಹೆಚ್ಚುತ್ತಿದ್ದು, ಬಿಜೆಪಿ ನಾಯಕರಿಗೆ ತಲೆ ನೋವು ತಂದಿದೆ. ಹಿರಿಯ ಶಾಸಕ ಆರಗ ಜ್ಞಾನೇಂದ್ರ ಬಹಿರಂಗವಾಗಿಯೇ ಸಿಟ್ಟು ಹೊರಹಾಕಿದ್ದಾರೆ. ಸವದಿಗೆ ಸಚಿವ ಸ್ಥಾನ ಕೊಟ್ಟಿರುವುದಕ್ಕೆ ಅನೇಕರು ಕಿಡಿ ಕಾರಿದ್ದಾರೆ. ಭೋವಿ ಹಾಗೂ ಬಂಟ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಪ್ರತಿಭಟನೆಗಳು ಆರಂಭವಾಗಿವೆ.
ಕತ್ತಿಗೆ ಮಂತ್ರಿಗಿರಿ ಭರವಸೆ?
ಸಚಿವ ಸ್ಥಾನ ಕೈತಪ್ಪಿರುವ ಕಾರಣಕ್ಕೆ ಸಿಡಿದೆದ್ದಿರುವ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ಕೊಡಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಉಮೇಶ ಕತ್ತಿ ಅವರನ್ನು ಬಿಟ್ಟು, ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಬಿಜೆಪಿಯ ಕೆಲವು ಶಾಸಕರು ಹಾಗೂ ಅನರ್ಹಗೊಂಡಿರುವ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಗುರುವಾರ ಕರೆ ಮಾಡಿದ್ದ ಕತ್ತಿ, ಸಂಜೆ ಹೊತ್ತಿಗೆ ಬಂದು ಭೇಟಿಯಾಗುವುದಾಗಿ ತಿಳಿಸಿದ್ದರು. ಎಲ್ಲ ಪಕ್ಷದವರ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ಕತ್ತಿ ಬಂಡಾಯವೆದ್ದರೆ ಇನ್ನಷ್ಟು ಶಾಸಕರು ಅವರ ಜತೆ ಸೇರಿಕೊಳ್ಳಬಹುದೆಂಬ ಆತಂಕ ಬಿಜೆಪಿಯಲ್ಲಿ ಸೃಷ್ಟಿಯಾಗಿತ್ತು.
ಕತ್ತಿ ಮನೆಗೆ ಧಾವಿಸಿದ ಸಚಿವ ಬಸವರಾಜ ಬೊಮ್ಮಾಯಿ, ಅವರ ಮನವೊಲಿಸುವ ಯತ್ನ ಮಾಡಿದರು. ‘ಸಚಿವ ಸ್ಥಾನ ಕೊಡದಿದ್ದರೆ ನಮ್ಮ ದಾರಿ ನಮಗೆ ನಿಮ್ಮ ದಾರಿ ನಿಮಗೆ. ಉಳಿದಿದ್ದು ನಿಮಗೆ ಬಿಟ್ಟಿದ್ದು. ಏನು ಮಾಡುತ್ತೀರೋ ಮಾಡಿ’ ಎಂದು ಕಟುವಾಗಿಯೇ ಹೇಳಿದ ಕತ್ತಿ, ಬಂಡಾಯದ ಮುನ್ಸೂಚನೆ ನೀಡಿದರು. ಈ ಬೆಳವಣಿಗೆ ಬೆನ್ನಲ್ಲೇ, ಮುಂದಿನ ವಾರದ ಹೊತ್ತಿಗೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆಯನ್ನು ಕತ್ತಿಗೆ ನೀಡಲಾಯಿತುಎಂದು ಗೊತ್ತಾಗಿದೆ.
ಆದರೆ, ಸಿದ್ದರಾಮಯ್ಯಗೆ ಕತ್ತಿ ಕರೆ ಮಾಡಿದ್ದು ಬಿಜೆಪಿ ನಾಯಕರನ್ನು ಬೆದರಿಸುವ ತಂತ್ರದ ಭಾಗ ಎಂದೂ ವಿಶ್ಲೇಷಿಸಲಾಗುತ್ತಿದೆ.
ಪ್ರಭಾವಿ ಇಲಾಖೆಗೆ ಹಿರಿಯರ ಬೇಡಿಕೆ
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಹಾಗೂ ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್. ಈಶ್ವರಪ್ಪ, ಆರ್.ಅಶೋಕ್ ಅವರು ಮಹತ್ವದ ಖಾತೆಗಳಿಗೆ ಬೇಡಿಕೆ ಮಂಡಿಸಿರುವುದು ಯಡಿಯೂರಪ್ಪ ಅವರಿಗೆ ತಲೆ ನೋವು ತಂದಿದೆ.
ಗೃಹ, ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ಕಂದಾಯ, ಬೆಂಗಳೂರು ಅಭಿವೃದ್ಧಿ,ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಪ್ರಮುಖ ಖಾತೆಗಳನ್ನು ನೀಡುವುದಾಗಿ ಅನರ್ಹರಿಗೆ ಆಶ್ವಾಸನೆ ನೀಡಲಾಗಿದೆ.
‘ಇಂತಹ ಪ್ರಭಾವಿ ಖಾತೆಗಳನ್ನು ನಮಗೆ ನೀಡಬೇಕು. ಒಂದು ವೇಳೆ ಅನರ್ಹರಿಗಾಗಿ ಮೀಸಲಿಟ್ಟರೆ ಮತ್ತೆ ನಮಗೆ ಸಿಗುವುದಿಲ್ಲ. ಅವುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವ ಬದಲು ಈಗಲೇ ಎರಡೆರಡು ಖಾತೆಗಳನ್ನು ಹಂಚಿಕೆ ಮಾಡಿ ಬಿಡಿ. ಅನರ್ಹರಿಗೆ ಕೊಡಬೇಕಾದಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ’ ಎಂದು ಶೆಟ್ಟರ್, ಈಶ್ವರಪ್ಪ, ಅಶೋಕ್ ಅವರು, ಮುಖ್ಯಮಂತ್ರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
*
ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಬಂದಿದ್ದಾರೆ. ಸಾಧ್ಯವಾದರೆ ಅವರೊಂದಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇವೆ.
-ಎಚ್.ವಿಶ್ವನಾಥ್, ಜೆಡಿಎಸ್‌ನ ಅನರ್ಹ ಶಾಸಕ
*
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿಯಾಗಿ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕುರಿತು ಚರ್ಚಿಸಲಿದ್ದೇನೆ.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.