ADVERTISEMENT

ರಾಜ್ಯ ರಾಜಕೀಯ ಬೆಳವಣಿಗೆ | ಹೈಕಮಾಂಡ್‌ ವರದಿ ತರಿಸಿಕೊಳ್ಳುತ್ತಿದೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 11:26 IST
Last Updated 5 ಅಕ್ಟೋಬರ್ 2024, 11:26 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ರಾಜ್ಯದಲ್ಲಿ ಏನೇನಾಗುತ್ತಿದೆ ಎಂದು ಆಗಿಂದಾಗ ಹೈಕಮಾಂಡ್‌ ವರದಿ ತರಿಸಿಕೊಳ್ಳುತ್ತಿದೆ. ಬೆಳವಣಿಗೆಗಳನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವೂ ವರದಿ ಕಳುಹಿಸುತ್ತೇವೆ. ವರದಿ ತಯಾರಿಸಲೆಂದೇ ಸಂಶೋಧನಾ ತಂಡವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಜ್ಯದಲ್ಲಿ ಸಚಿವರ ಸಭೆ, ಸಚಿವರಿಂದ ದೆಹಲಿ ಭೇಟಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಏನೆಲ್ಲ ಆಗುತ್ತಿದೆ ಎಂದು ಹೈಕಮಾಂಡ್‌ಗೆ ಸಂಶೋಧನಾ ತಂಡ ವರದಿ ತಲುಪಿಸುತ್ತದೆ’ ಎಂದರು. 

‘ಎಫ್ಐಆರ್‌ಗೆ ಭಯ ಪಡುವುದಿಲ್ಲ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ, ‘ಅದು ಅವರ ವೈಯಕ್ತಿಕ ವಿಚಾರ. ಆ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ’ ಎಂದರು. 

ADVERTISEMENT

‘ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಗೊತ್ತಿಲ್ಲ. ಅಷ್ಟಕ್ಕೂ ನಾನು ಗೃಹ ಸಚಿವ ಅಲ್ಲ’ ಎಂದೂ ಹೇಳಿದರು.

‘ಸದ್ಯ ಚನ್ನಪಟ್ಟಣದಲ್ಲಿ ಕೆಲಸ ಮಾಡಿಸುತ್ತಿದ್ದೇನೆ. ಸಿಎಸ್ಆರ್‌ ನಿಧಿಯಲ್ಲಿ ಶಾಲೆಗಳ ಭೂಮಿ ಪೂಜೆ ಮಾಡಿಸಿದ್ದೇನೆ. ಅದು ಬಿಟ್ಟರೆ ಬೇರೆ ಏನೂ ನನಗೆ ಗೊತ್ತಿಲ್ಲ’ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತೀಶ ಜಾರಕಿಹೊಳಿ ಭೇಟಿ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡದೆ ಇನ್ನು ಯಾರನ್ನು ಭೇಟಿ ಮಾಡಬೇಕು’ ಎಂದು ಪ್ರಶ್ನೆ ಕೇಳಿದರು.

‘ನಾನು ಕೂಡಾ ದೆಹಲಿಗೆ ಹೋದ ಸಂದರ್ಭಗಳಲ್ಲಿ ನಮ್ಮ ಅಧ್ಯಕ್ಷರನ್ನು, ನಾಯಕರನ್ನು ಭೇಟಿ ಮಾಡುತ್ತೇನೆ’ ಎಂದರು.

ವರದಿ ಸಲ್ಲಿಕೆ:

ಲೋಕಸಭಾ ಚುನಾವಣೆಯಲ್ಲಿ ಮೈಸೂರು ವಿಭಾಗದಲ್ಲಿ ಪಕ್ಷದ ಸಾಧನೆ ಕುರಿತ ಸತ್ಯ ಶೋಧನಾ ವರದಿಯನ್ನು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ನೇತೃತ್ವದ ನಿಯೋಗವು ಡಿ‌.ಕೆ ಶಿವಕುಮಾರ್ ಅವರಿಗೆ ಶನಿವಾರ ಸಲ್ಲಿಸಿತು.

ಈ ವೇಳೆ ಮಾತನಾಡಿದ ಶಿವಕುಮಾರ್, ‘ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲು, ಗೆಲುವಿನ ಪರಾಮರ್ಶೆಗೆ ಸಮಿತಿ ರಚನೆ ಮಾಡಿದ್ದೆವು. ಹಾಸನ, ಮಂಡ್ಯ, ಕೊಡಗು, ಚಾಮರಾಜನಗರ ಭಾಗದ ವರದಿಯನ್ನು ನಿಯೋಗ ಕೊಟ್ಟಿದೆ. ಈ ವರದಿಯ ಬಗ್ಗೆ ನಾವು ಅಧ್ಯಯನ ಮಾಡುತ್ತೇವೆ’ ಎಂದರು.

ಪಕ್ಷದ ನಿಲುವುಗಳಿಗೆ ಬದ್ಧ:

‘ನಾನು ಪಕ್ಷದ ನಿಲುವುಗಳಿಗೆ ಬದ್ಧನಾಗಿರುವವನು. ವೈಯಕ್ತಿಕ ವಿಚಾರಗಳೇ ಬೇರೆ. ಪಕ್ಷದಲ್ಲಿ ಕೆಲವು ನೀತಿ ವಿಚಾರಗಳು ಬರುತ್ತವೆ. ರಾಹುಲ್ ಗಾಂಧಿ ನಮಗೆಲ್ಲ ಮಾರ್ಗದರ್ಶನ ನೀಡಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಕೆಲವು ಅಂಶಗಳು ಇದ್ದವು.‌ ಜಾತಿ ಗಣತಿ ವಿಚಾರದ ಬಗ್ಗೆಯೂ ನಾವು ಚರ್ಚೆ ಮಾಡುತ್ತೇವೆ’ ಎಂದರು. 

‘ಜಾತಿಗಣತಿ ವಿಚಾರ ಸಚಿವ ಸಂಪುಟ ಸಭೆಗೆ ಬಂದಾಗ ಅಲ್ಲಿ ಆ ವಿಚಾರವಾಗಿ ಚರ್ಚೆ ಮಾಡುತ್ತೇವೆ’ ಎಂದರು.  

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ’ ಎಂದೂ ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.