ಬೆಂಗಳೂರು: ಜನವರಿ 22ರಂದು ಆಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ರಾಮಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಅಯೋಧ್ಯೆಯಿಂದ ಬಂದಿರುವ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಮಂತ್ರಾಕ್ಷತೆಯನ್ನು ದೇಶದಾದ್ಯಂತ ವಿತರಣೆ ಮಾಡಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಮಮಂದಿರ ಉದ್ಘಾಟನೆ ವಿಚಾರ ಕಾಂಗ್ರೆಸ್–ಬಿಜೆಪಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಮಂತ್ರಾಕ್ಷತೆ ವಿಚಾರ ಪ್ರಸ್ತಾಪಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಂಸದ ಪ್ರತಾಪ ಸಿಂಹ, ಮಂತ್ರಾಕ್ಷತೆಯನ್ನೇ ಸ್ವೀಕಾರ ಮಾಡಲು ಮನಸ್ಸಿಲ್ಲದ ಕಾಂಗ್ರೆಸ್ ‘ಕೈ’ಗಳಿಗೆ ಮಂತ್ರಾಕ್ಷತೆಗಾಗಿ ಅಕ್ಕಿ ಕೊಡುವಷ್ಟು ಉದಾರ ಕೈ ಉಂಟೇ’ ಎಂದು ಪ್ರಶ್ನಿಸಿದ್ದಾರೆ.
‘ಅಕ್ಷತೆ, ಮಂತ್ರ –ಗೋತ್ರ ಎಂಬುದನ್ನೇ ನಂಬದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಾಕ್ಷತೆಗಾಗಿ ಅಕ್ಕಿ ಕೊಡುತ್ತಾರೆ ಎಂದರೆ ರಾಜ್ಯದ ಜನ ನಂಬುತ್ತಾರೆಯೇ’ ಎಂದು ಪ್ರತಾಪ ಸಿಂಹ ಲೇವಡಿ ಮಾಡಿದ್ದಾರೆ.
‘ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನನಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಬಂದಿಲ್ಲ. ನಮ್ಮ ಅಧ್ಯಕ್ಷರಿಗೆ ಆಹ್ವಾನ ಬಂದಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಪಕ್ಷ ಈ ವಿಚಾರದಲ್ಲಿ ತೀರ್ಮಾನ ಮಾಡುತ್ತದೆ. ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ’ ಎಂದು ಈಚೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದರು.
‘ನಮ್ಮ ಮನೆಯಲ್ಲಿ ಶಿವ, ಹನುಮಂತನ ಭಾವಚಿತ್ರ ಇಟ್ಟು ಪೂಜೆ ಮಾಡುತ್ತೇವೆ. ನಮ್ಮ ಹೃದಯದಲ್ಲಿ ನಾವು ನಂಬಿರುವ ದೇವರುಗಳನ್ನು ಇಟ್ಟು ಪೂಜಿಸಿಕೊಂಡು ಬಂದಿದ್ದೇವೆ. ಆರೆಸ್ಸೆಸ್ ಮತ್ತು ಬಿಜೆಪಿಯವರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯಲ್ಲಿಯೇ ಮಂತ್ರಾಕ್ಷತೆ ಹಂಚುತ್ತಿದ್ದಾರೆ. ಅದೇ ನಮಗೆ ಸಂತೋಷ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.