ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಸೋಲಿಗೆ ರಾಜ್ಯ ಘಟಕದ ಅಧ್ಯಕ್ಷರೊಬ್ಬರೇ ಹೊಣೆಯಲ್ಲ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಸೋಲಿಗೆ ಪಕ್ಷವೇ ಜವಾಬ್ದಾರಿ ಹೊರಲಿದೆ. ಪಕ್ಷವು ಇದನ್ನು ಸವಾಲಾಗಿ ತೆಗೆದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೂತ್‌ಮಟ್ಟದಿಂದ ಸಂಘಟಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಗೆಲುವಿಗೆ ವಾಮ ಮಾರ್ಗ ಅನುಸರಿಸಿದರು. ಜಾತಿ ವಿಷಬೀಜ ಬಿತ್ತಿ, ಅಲ್ಪಸಂಖ್ಯಾತರನ್ನು ಧ್ರುವೀಕರಿಸಿದರು. ಮುಖ್ಯಮಂತ್ರಿಯವರು ತಾವು ಮುಖ್ಯಮಂತ್ರಿಯಾಗಿ ಐದು ವರ್ಷ ಇರಬೇಕೋ ಬೇಡವೋ ಎಂದು ಮಂತ್ರಿಗಳಿಗೆ, ಶಾಸಕರಿಗೆ ಹೇಳಿ ಭಯವನ್ನುಂಟು ಮಾಡಿ ಚುನಾವಣೆ ಎದುರಿಸಿ ಗೆದ್ದಿದ್ದಾರೆ. ಎನ್‌ಡಿಎ ಮೂರು ಕ್ಷೇತ್ರಗಳಲ್ಲಿ ಸೋತಿದೆ. ಸೋಲಿನ ಅವಲೋಕನ ಮಾಡಿ ಬಿಜೆಪಿಯನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
‘ಪಕ್ಷ ಎಂದ ಮೇಲೆ ಸಣ್ಣಪುಟ್ಟ ಗೊಂದಲಗಳಿರುತ್ತವೆ. ಇವನ್ನು ನಾವು ಸರಿಪಡಿಸಿ ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಒಳ್ಳೆಯ ರೀತಿಯಲ್ಲಿ ಕಟ್ಟುತ್ತೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.