ಬೆಂಗಳೂರು: ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ವಿಕೃತ ಮನಸ್ಸು ಹೊಂದಿರುವ ಬಿ.ಕೆ. ಹರಿಪ್ರಸಾದ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಇಬ್ಬರೂ ಸೇರಿ ಒಂದು ಪಕ್ಷ ಆರಂಭಿಸುವುದು ಒಳ್ಳೆಯದು ಅಂತ ನನ್ನ ಭಾವನೆ’ ಎಂದು ಬಿ.ಸಿ. ಪಾಟೀಲ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬಸನಗೌಡ ಪಾಟೀಲ ಯತ್ನಾಳ ಅವರೇ, ನಾನು ಬಸವನಗೌಡ ಪಾಟೀಲ ಅಂದರೆ ಬಿ.ಸಿ. ಪಾಟೀಲ. ಏನು ಪಾಟೀಲ ಅವರೇ, ನೀವು ಈ ರೀತಿ ಹೇಳಿಕೆ ಕೊಡುವುದು ಸರಿನಾ... ನೀವು ಈ ರೀತಿ ಹೇಳಿಕೆ ಕೊಡುವುದು ನೋಡಿದರೆ ನೀವು ಬಿಜೆಪಿ ಪರವಾಗಿರುವಿರೋ ಅಥವಾ ಕಾಂಗ್ರೆಸ್ ಪರವಾಗಿರುವಿರೋ ಎನ್ನುವುದು ಅನುಮಾನ. ವಿಷಯ ತಿಳಿದುಕೊಂಡು ಮಾತಾಡುವುದು ಬಹಳ ಒಳ್ಳೆಯದು’ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಗಾಗ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕನ ಸ್ಥಾನ ದೂರೆಯದೆ ಕಂಗಾಲಾಗಿರುವ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರು ಕೂಡಾ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ ವಿರುದ್ಧ ಹೇಳಿಕೆ ನೀಡುತ್ತಾ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿ.ಸಿ. ಪಾಟೀಲ ಅವರು ಹರಿಪ್ರಸಾದ್ ಮತ್ತು ಯತ್ನಾಳ ಅವರ ಕಾಲು ಎಳೆದಿದ್ದಾರೆ.
‘ತಮ್ಮ ಸ್ವಂತ ಕ್ಷೇತ್ರದ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಆಮೇಲೆ ಯೋಚಿಸಬಹುದು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿ.ಸಿ.ಪಾಟೀಲರಿಗೆ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.