ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ತಮ್ಮ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಿರುವ ಪಕ್ಷದ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ವರಿಷ್ಠರ ಮೇಲೆ ಒತ್ತಡ ಹಾಕಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದಾಗಿದ್ದಾರೆ.
‘ಬಿ.ಎಸ್. ಯಡಿಯೂರಪ್ಪ 2019ರಲ್ಲಿ ಮುಖ್ಯಮಂತ್ರಿಯಾದ ದಿನದಿಂದಲೂ ಅವರ ವಿರುದ್ಧ ಹಾಗೂ ತಾವು ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರವೂ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಇಷ್ಟು ವರ್ಷಗಳಾದರೂ ಶಿಸ್ತುಕ್ರಮ ಕೈಗೊಂಡಿಲ್ಲ. ಇದರಿಂದ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಅವರ ಜತೆಗೆ ಇನ್ನೂ ಕೆಲ ಶಾಸಕರು, ಮಾಜಿ ಶಾಸಕರು ಸೇರಿಕೊಂಡು ಬಹಿರಂಗವಾಗಿ ಟೀಕೆ ಮಾಡುತ್ತಿದ್ದಾರೆ. ಅಲ್ಲದೇ, ಪಕ್ಷದ ವೇದಿಕೆ ಹೊರತಾಗಿ ಹೋರಾಟ ರೂಪಿಸುವ ಮೂಲಕ ಪಕ್ಷಕ್ಕೆ ಪೆಟ್ಟು ನೀಡುತ್ತಿದ್ದಾರೆ. ತಕ್ಷಣ ಇಂತಹ ನಡೆಗೆ ತಡೆ ಹಾಕಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರ ಬಳಿ ದೂರು ನೀಡಲು ನಿರ್ಧರಿಸಿದ್ದಾರೆ’ ಎಂದು ಪಕ್ಷದ ಮೂಲಗಳು ಹೇಳಿವೆ.
ವರಿಷ್ಠರ ಗಮನಕ್ಕೆ ತರುತ್ತೇವೆ: ಪಿ.ರಾಜೀವ್
ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವ ಕುರಿತು ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಯತ್ನಾಳ ಅವರು ತಮ್ಮ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ. ರಾಜ್ಯ ಮತ್ತು ಜಿಲ್ಲಾ ನಾಯಕರಿಂದ ಅನುಮತಿ ಪಡೆದಿಲ್ಲ. ಅದು ಅಶಿಸ್ತು ಕೂಡ ಆಗುತ್ತದೆ ಎಂದರು.
‘ಇಲ್ಲಿಯವರೆಗೆ ರಾಜ್ಯ ಮಟ್ಟದಲ್ಲೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಳ್ಳಲಿಲ್ಲ. ಅನ್ಯ ಮಾರ್ಗವಿಲ್ಲದೇ ರಾಷ್ಟ್ರ ನಾಯಕರ ಗಮನಕ್ಕೆ ತರುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.