ADVERTISEMENT

ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಬಿಜೆಪಿ ಮಾಡಿದ್ದೇನು?: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2022, 12:27 IST
Last Updated 2 ಜುಲೈ 2022, 12:27 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ. ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಮಾಡಿದ್ದೇನು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸರ್ಕಾರಿ ಶಾಲೆಗಳ ಸುಸ್ಥಿತಿ ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ‘ಬಿ.ಸಿ.ನಾಗೇಶ್‌ ಅವರೇ, ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುತ್ತೀರಿ, ಪಠ್ಯ ಪರಿಷ್ಕರಣೆ ಮಾಡಿದ್ದೀರಿ. ಪಠ್ಯಕ್ಕೆ ‘ಆಪರೇಷನ್‌ ಕಮಲʼದ ಒಂದು ಅಧ್ಯಾಯವನ್ನೂ ಸೇರಿಸಬೇಕಿತ್ತು, ಭವ್ಯಭಾರತವನ್ನು ಬೆಳಗಲು!!’ ಎಂದು ವ್ಯಂಗ್ಯವಾಡಿದ್ದಾರೆ.

‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳ ದೃಶ್ಯ ವೈಭವ!! ಮಾಳಿಗೆಗಳು ಸೋರುತ್ತಿವೆ, ಗೋಡೆಗಳು ಬಣ್ಣಗೆಟ್ಟಿವೆ, ಕಿಟಕಿ, ಬಾಗಿಲು ಹಾಳಾಗಿವೆ, ಕುಡಿಯಲು ನೀರಿಲ್ಲ, ಮಕ್ಕಳಿಗೆ ಶೌಚಾಲಯವೂ ಇಲ್ಲ, ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲ’ #ಸೋರುತಿಹುದು_ಶಾಲೆ_ಮಾಳಿಗೆ ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ADVERTISEMENT

‘ಬಿಜೆಪಿ ಬಣ್ಣಗೇಡು ವರಸೆಗೆ ಇದು ತಾಜಾ ಉದಾಹರಣೆ. ಹೇಳುವುದು ಒಂದು, ಮಾಡುವುದು ಇನ್ನೊಂದು. ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಅರಾಜಕತೆ ಮಕ್ಕಳ ಕಲಿಕೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಪಠ್ಯಕ್ಕೆ ಕೇಸರಿ ಬಳಿದು ಕತ್ತರಿ ಹಾಕುವ ಅಕ್ಷರದ್ರೋಹಿ ಬಿಜೆಪಿ ಸರಕಾರಕ್ಕೆ ಬಣ್ಣಗೆಟ್ಟ ಶಾಲೆಗಳ ಗೋಡೆಗಳೇ ಕಾಣುತ್ತಿಲ್ಲ’ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಸೋರುತ್ತಿರುವ ಶಾಲೆಗಳನ್ನು ಮುಖಕ್ಕೆ ರಾಚುವಂತೆ ತೋರಿಸಿದೆ. ರಾಜ್ಯದಲ್ಲಿ 75,675 ಶಾಲೆ ಕೊಠಡಿಗಳು ಶಿಥಿಲವಾಗಿವೆ. ಇಲ್ಲಿ ಶಿಥಿಲ ಆಗಿರುವುದು ಕರ್ನಾಟಕದ ಹೆಮ್ಮೆ ಎಂದು ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘224 ವಿಧಾನಸಭೆ ಕ್ಷೇತ್ರಗಳ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಕ್ಕಳು ಜೀವ ಅಂಗೈಯಲ್ಲಿಟ್ಟುಕೊಂಡು ಕಲಿಯುತ್ತಿದ್ದಾರೆ. ಅವರಿಗೆ ಶಾಲೆಯೇ ಶಿಕ್ಷೆಯಾಗಿದೆ. ಶಿಕ್ಷಣ ಇಲಾಖೆ ಅದಕ್ಷತೆಯ ಕೂಪ ಎನ್ನುವುದಕ್ಕೆ ಇದೇ ಸಾಕ್ಷಿ. ಶಿಕ್ಷಣ ಸಚಿವರು, ಆ ಇಲಾಖೆಯ ಅಧಿಕಾರಿಗಳ ಪರಮ ಬೇಜವಾಬ್ದಾರಿಯ ಪರಾಕಾಷ್ಠೆ ಇದು’ ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

‘ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಸೇರಲಾಗದ ಬಡ, ಮಧ್ಯಮವರ್ಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಹೇಳಿ ಶಿಕ್ಷಣ ಸಚಿವರೇ’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

‘ಶಾಲೆಗಳ ಸುಸ್ಥಿತಿ, ಮಕ್ಕಳ ಸುರಕ್ಷತೆ ಬಗ್ಗೆ ಸುಮ್ಮನಿದ್ದೀರಿ. ಪಠ್ಯದ ಕತ್ತರಿಗೆ ಇರುವಷ್ಟು ಆತುರ ಶಾಲೆ ಕೊಠಡಿಗಳ ರಿಪೇರಿಗೆ ಯಾಕಿಲ್ಲ? ಇಲ್ಲಿ ಶೇಕಡ 40 ಕಮೀಷನ್ ವ್ಯವಹಾರ ಕುದುರಲಿಲ್ಲವೇ? ಭಾರತವನ್ನು ವಿಶ್ವ ಗುರು ಮಾಡುವುದು ಎಂದರೆ ಹೀಗೇನಾ? ಹೇಳಿ ಮಾನ್ಯ ಶಿಕ್ಷಣ ಸಚಿವರೇ’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

‘ತಕ್ಷಣವೇ ಸರ್ಕಾರ ಕ್ರಮ ವಹಿಸಬೇಕು. ಅಧಿಕಾರಿಗಳನ್ನು ಶಾಲೆಗಳಿಗೆ ಅಟ್ಟಿ ರಿಪೇರಿ ಕೆಲಸ ಮಾಡಿಸಿ ಎಲ್ಲ ಮೂಲಸೌಕರ್ಯ ಒದಗಿಸಬೇಕು. ಒಂದು ಮಗುವಿಗೆ ಅಪಾಯವಾದರೂ ಸುಮ್ಮನಿರುವ ಪ್ರಶ್ನೆ ಇಲ್ಲ. ಒಂದು ತಿಂಗಳೊಳಗೆ ಶಾಲೆಗಳು ಸರಿ ಆಗದಿದ್ದರೆ, ಸದನದ ಒಳಗೆ, ಹೊರಗೆ ಶಿಕ್ಷಣ ಸಚಿವರು ಹೋರಾಟ ಎದುರಿಸಬೇಕಾಗುತ್ತದೆ’ ಎಂದು ಕುಮಾರಸ್ವಾಮಿ ಸರ್ಕಾರ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.