ADVERTISEMENT

ಕಾಂಗ್ರೆಸ್ ಸರ್ಕಾರ ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ: ಬೊಮ್ಮಾಯಿ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 10:23 IST
Last Updated 19 ಫೆಬ್ರುವರಿ 2024, 10:23 IST
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯ ಸರ್ಕಾರ ವಸತಿ ಶಾಲೆಗಳಲ್ಲಿ ಇದುವರೆಗೂ ಇದ್ದ ಜ್ಞಾನ ದೇಗುಲವಿದು ಕೈಮುಗಿದು ಬಾ ಎಂಬ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನೆ ಮಾಡಿ ಎಂದು ಮಕ್ಕಳ ಮನಸಲ್ಲಿ ಸಂಘರ್ಷ ಮೂಡಿಸುವ ಕೆಲಸ ಮಾಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಸಮಾಜದಲ್ಲಿ ಮಕ್ಕಳಿಂದ ಹಿಡಿದು ಎಲ್ಲರಲ್ಲಿಯೂ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಸರ್ಕಾರದ ವಸತಿ ಶಾಲೆಗಳಿಗೆ ಅಕ್ಕಿ ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಾವು ಖಜಾನೆ ಖಾಲಿ ಇದೆ ಅಂತ ಹೇಳುತ್ತಿದ್ದೇವೆ‌. ಅಭಿವೃದ್ಧಿಗೆ ಹಣ ಕೊಡುವುದಿಲ್ಲ. ಹಸಿವು ಮುಕ್ತ ಕರ್ನಾಟಕ ಅಂತ ಬೋರ್ಡ್ ಹಾಕಿಕೊಂಡಿದ್ದಾರೆ. ಮೊದಲು ನಿಮ್ಮ ಶಾಲಾ ಮಕ್ಕಳಿಗೆ ಅನ್ನ ಕೊಡಿ ವಿದ್ಯೆ ಕೊಡಿ ಎಂದು ತಿಳಿಸಿದರು.

ಬಡವರಿಗೆ ಅಕ್ಕಿಯನ್ನು ನರೇಂದ್ರ ಮೋದಿ ಸರ್ಕಾರ ಕೊಡುತ್ತಿದೆ. ಅದನ್ನೂ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ನೀಡುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ರಾಮಮಂದಿರ ಕುರಿತ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ 500 ವರ್ಷಗಳ ಹಿಂದೆಯೇ ಇದೆ. ಸಂತೋಷ ಲಾಡ್ ಏನು ಹೇಳಿಕೆ ನೀಡಿದ್ದಾರೊ ಗೊತ್ತಿಲ್ಲ. ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು.

ಬಿಜೆಪಿ ಗೆಲ್ಲಿಸಲು ಜನ ತೀರ್ಮಾನಿಸಿದ್ದಾರೆ

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಎಂಪಿ ಸ್ಥಾನ ಗೆಲ್ಲಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಫಲಿತಾಂಶ ಬರಲಿದೆ. ಸತ್ಯ ಏನಿದೆ ಅಂತ ಗೊತ್ತಾಗಲಿದೆ. ಅವರಿಗೂ ಸತ್ಯ ಗೊತ್ತಿದೆ. ಅದಕ್ಕಾಗಿ ಅವರು ಕೇಂದ್ರ ರಾಜ್ಯ ಸರ್ಕಾರದ ನಡುವೆ ಕಂದಕ ಸೃಷ್ಟಿಸಲು ಮುಂದಾಗಿದ್ದಾರೆ. ಈಗಾಗಲೇ ಭಾರತದ ಜನರು ಬಿಜೆಪಿಯನ್ನು ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌ನ ನಾಯಕರಾದ ಕಮಲ್‌ನಾಥ್ ಸೇರಿದಂತೆ ಅನೇಕ ಹಿರಿಯ ನಾಯಕರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.