ADVERTISEMENT

ರಾಹುಲ್ ಫೋಟೊ ಹಾಕಿ, ಕ್ಯೂಆರ್ ಕೋಡ್ ಸೃಷ್ಟಿಸಿ ಭಿಕ್ಷೆ ಬೇಡಬಹುದಲ್ಲವೇ?: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2022, 10:43 IST
Last Updated 21 ಸೆಪ್ಟೆಂಬರ್ 2022, 10:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಾಂಗ್ರೆಸ್ಸಿಗರೇ, ಭಾರತ್‌ ಜೋಡೋ ಯಾತ್ರೆಗಾಗಿ ರಾಹುಲ್‌ ಗಾಂಧಿ ಅವರ ಫೋಟೊ ಬಳಸಿ ಭಿಕ್ಷೆ ಬೇಡಬಹುದಲ್ಲವೇ’ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

ರಾಜ್ಯ ಬಿಜೆಪಿ ಸರ್ಕಾರ 'ಶೇ 40 ಕಮಿಷನ್ ಸರ್ಕಾರ'ವೆಂದು ಆರೋಪಿಸಿ ‘ಪೇ ಸಿಎಂ’ (PayCM) ಘೋಷಣೆಯ ಭಿತ್ತಿಪತ್ರ ಮತ್ತು ಕ್ಯೂಆರ್ ಕೋಡ್ ಸಹಿತ ಕಾಂಗ್ರೆಸ್ ಪಕ್ಷ ಅಭಿಯಾನ ಆರಂಭಿಸಿದೆ.

ಇದಕ್ಕೆ ಟ್ವಿಟರ್‌ನಲ್ಲಿ ತಿರುಗೇಟು ಕೊಟ್ಟಿರುವ ಬಿಜೆಪಿ, ‘ಭಾರತ್‌ ಜೋಡೋ ಯಾತ್ರೆಗಾಗಿ ಕೇರಳದ ಕೊಲ್ಲಂನಲ್ಲಿ ತರಕಾರಿ ವ್ಯಾಪಾರಿಯೊಬ್ಬರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿ ಬಲವಂತದಿಂದ ದೇಣಿಗೆ ಸಂಗ್ರಹಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ಸಿಗರೇ, ಯಾತ್ರೆಗಾಗಿ ರಾಹುಲ್‌ ಗಾಂಧಿ ಅವರ ಫೋಟೊ ಹಾಕಿ, ಕ್ಯೂಆರ್ ಕೋಡ್‌ ಸೃಷ್ಟಿಸಿ ಭಿಕ್ಷೆ ಬೇಡಬಹುದಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

‘ಶೇ 40 ಕಮಿಷನ್ ಸರ್ಕಾರ’ಎಂದು ಕಾಂಗ್ರೆಸ್ ಆರೋಪ
ರಾಜ್ಯ ಬಿಜೆಪಿ ಸರ್ಕಾರ 'ಶೇ 40 ಕಮಿಷನ್ ಸರ್ಕಾರ'ವೆಂದು ಕಾಂಗ್ರೆಸ್ ಆರೋಪಿಸಿದ್ದು, ಬೆಂಗಳೂರು ನಗರದ ವಿವಿಧೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಚಿತ್ರ ಸಹಿತ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಘಟಕ ಇತ್ತೀಚೆಗೆ ಬಿಡುಗಡೆ ಮಾಡಿದ 'ಶೇ 40 ಕಮಿಷನ್ ಸರ್ಕಾರ' ವೆಬ್‌ಸೈಟ್ ತೆರೆದುಕೊಳ್ಳಲಿದೆ.

ಈ ಮಧ್ಯೆ, ವಿಧಾನಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 'ಶೇ 40 ಕಮಿಷನ್ ಸರ್ಕಾರ' ಎಂದು ಆರೋಪಿಸಿ ನಿಲುವಳಿ ಸೂಚನೆ ಮಂಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.