ಬೆಂಗಳೂರು: ಬಹಳಷ್ಟು ಕಡೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚಲಾಗಿದೆ ಎಂಬ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಗೆದ್ದರೆ ಜನಾಧಿಕಾರ, ಸೋತರೆ ಇವಿಎಂ ಹ್ಯಾಕ್ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ‘ಚುನಾವಣೆ ಸೋತ ನಂತರ, ಆ ಸೋಲನ್ನು ಸ್ವೀಕರಿಸುವ ಮನೋಭಾವವನ್ನು ಇನ್ನೂ ಮೈಗೂಡಿಸಿಕೊಳ್ಳದ ಕಾರಣ ಇಂದು ಕಾಂಗ್ರೆಸ್‌ನ ಪರಿಸ್ಥಿತಿ ಹೀನಾಯವಾಗಿದೆ. ಕರ್ನಾಟಕ, ತೆಲಂಗಾಣ, ಜಾರ್ಖಂಡ್‌ನಲ್ಲಿ ಇವಿಎಂ ಸರಿಯಿದೆ, ಮಹಾರಾಷ್ಟ್ರದಲ್ಲಿ ಸರಿಯಿಲ್ಲ!. ಇದು ಯಾವ ರೀತಿಯ ಲಾಜಿಕ್’ ಎಂದು ಪ್ರಶ್ನಿಸಿದೆ.
‘ಇವಿಎಂ ಸುರಕ್ಷಿತ, ವಿಶ್ವಾಸಾರ್ಹ ಎಂದು ಸುಪ್ರೀಂ ಕೋರ್ಟ್‌ನಲ್ಲೂ ಸಾಬೀತಾಗಿದೆ. ಇವಿಎಂ ಹ್ಯಾಕ್ ಕುರಿತಂತೆ ಸಾಬೀತು ಪಡಿಸಲು ಚುನಾವಣಾ ಆಯೋಗ ಮುಕ್ತ ಅವಕಾಶ ಸಹ ನೀಡಿತ್ತು. ಆಗ ಎಲ್ಲಿ ಹೋಗಿದ್ದಿರಿ ಪರಮೇಶ್ವರ ಅವರೇ?‘ ಎಂದು ಕುಟುಕಿದೆ.
ಕಳೆದ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ತಾವು ಗೆದ್ದಾಗ ಇವಿಎಂ ಕುರಿತು ಅನುಮಾನ ಬಂದಿಲ್ಲವೇ? ಆ ಗೆಲುವಿನ ಬಗ್ಗೆ ಅನುಮಾನವಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಬಿಜೆಪಿ ಕಿಡಿಕಾರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.