ಬೆಂಗಳೂರು: ‘ಸಂವಿಧಾನ ಬದಲಾಯಿಸಬೇಕು ಎಂದು ಪೇಜಾವರ ಶ್ರೀ ಮತ್ತು ಸಂಘ ಪರಿವಾರ ನಿಷ್ಠೆಯ ಸ್ವಾಮೀಜಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಆತಂಕಕಾರಿ ಹಾಗೂ ಕಳವಳಕಾರಿ ಮಾತ್ರವಲ್ಲ, ಸಂವಿಧಾನಕ್ಕೆ ಬೆದರಿಕೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
‘ಸಂವಿಧಾನ ವಿರೋಧಿ ಸಂಘಟನೆ ಆರೆಸ್ಸೆಸ್ ನೂರು ವರ್ಷಕ್ಕೆ ಕಾಲಿಡುತ್ತಿರುವುದಕ್ಕೂ ಸಂವಿಧಾನ ಬದಲಾಯಿಸಬೇಕು ಎಂದು ಪರಿವಾರ ನಿಷ್ಠೆಯ ಯತಿಗಳು ಬೀದಿಗಿಳಿದು ಮಾತನಾಡುತ್ತಿರುವುದಕ್ಕೂ ಸಂಬಂಧವಿದೆ. ಇದರಲ್ಲಿ ಸಂಘ ಪರಿವಾರದ ನೂರು ವರ್ಷಗಳ ಸಂಭ್ರಮಾಚರಣೆಯ ಕಾರ್ಯಕ್ರಮದ ಗುಪ್ತಸೂಚಿ ಇರುವುದು ಸ್ಪಷ್ಟ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
‘ಸಮಾಜ ಸುಧಾರಕರ ಆಶಯಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ ರಚಿತವಾಗಿರುವ ‘ಸರ್ವ ಧರ್ಮ, ಸಹಬಾಳ್ವೆ’ಯ ತಿರುಳಿರುವ ಸಂವಿಧಾನದ ಬದಲಾವಣೆಗೆ ಒತ್ತಾಯಿಸಿರುವ ಪೇಜಾವರ ಶ್ರೀಗಳು, ತಮಗೆ ಗೌರವ ನೀಡುವ ಸಂವಿಧಾನ ಯಾವುದು ಎಂದು ಮೊದಲು ಸ್ಪಷ್ಟಪಡಿಸಲಿ. ನೂರಾರು ಕೋಟಿ ಜನಸಂಖ್ಯೆಯ ಭಾರತದಲ್ಲಿ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಲು ಸಂವಿಧಾನ ಅವಕಾಶ ನೀಡಿದೆ. ಇದರ ಬದಲಾಗಿ ಪೇಜಾವರ ಅವರು ಯಾವ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ. ದಲಿತರು-ಶೂದ್ರರು ಶ್ರೇಷ್ಠತೆಯ ವ್ಯಸನಕ್ಕೆ ತಲೆಬಾಗಬೇಕೇ? ಮಹಿಳೆಯರು ಅತ್ಯಾಚಾರಿಗಳನ್ನು ಆರಾಧಿಸಬೇಕೆನ್ನುವ ವ್ಯವಸ್ಥೆ ಇರಬೇಕೆ? ಜೀತದಾರರು, ಶ್ರಮಿಕ ವರ್ಗ ಮಾಲೀಕರ ಅಡಿಯಾಳಾಗಿರಬೇಕೇ’ ಎಂದು ಪ್ರಶ್ನಿಸಿದ್ದಾರೆ.
‘ಸಂವಿಧಾನದ ಬದಲಾಗಿ ಮನುಸ್ಮೃತಿ ಜಾರಿ ಮಾಡಲು ಹೊರಟಿರುವ ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನೇ ಪೇಜಾವರ ಅವರು ಮುಂದುವರಿಸುತ್ತಿದ್ದಾರೆ. ದಲಿತ, ಹಿಂದುಳಿದ, ಶೋಷಿತ ಸಮುದಾಯಗಳು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನ-ಘನತೆಯಿಂದ ಬದುಕುಬೇಕಾದ ವ್ಯವಸ್ಥೆ ಇರುವುದು ಸಂವಿಧಾನದಡಿಯಲ್ಲಿ ಮಾತ್ರ’ ಎಂದೂ ಹರಿಪ್ರಸಾದ್ ಹೇಳಿದ್ದಾರೆ.
‘ಕಾಂಗ್ರೆಸ್‌ಗೆ ಅಷ್ಟೊಂದು ದುರ್ಗತಿ ಇಲ್ಲ’
ಬೆಂಗಳೂರು: ‘ಚನ್ನಪಟ್ಟಣ ಚುನಾವಣೆಯ ಸೋಲಿನ ಪರಿಣಾಮ ಜೆಡಿಎಸ್ ಪಕ್ಷದ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಚರ್ಚೆ ನಡೆಯುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ದುರ್ಗತಿ ಇಲ್ಲ. ಬಿಜೆಪಿ ಮಾಡಿದ ತಪ್ಪು ನಾವು ಮಾಡಲ್ಲ’ ಎಂದು ಬಿ.ಕೆ ಹರಿಪ್ರಸಾದ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾವು ಬಿಜೆಪಿಯ ರೀತಿಯಲ್ಲೇ ನಡೆದರೆ ಅದಕ್ಕೇನಾದರೂ ಬೆಲೆ ಇರುತ್ತದೆಯೇ? ಕರ್ನಾಟಕದಲ್ಲಿ ಮೂರನೇ ಶಕ್ತಿ ನಮಗೆ ಬೇಡ’ ಎಂದರು.
‘ಚನ್ನಪಟ್ಟಣದಲ್ಲಿ ಜಾತಿ ಮೇಲೆ ಉಪ ಚುನಾವಣೆ ನಡೆದಿಲ್ಲ ಶಕ್ತಿಯ ಮೇಲೆ ನಡೆದಿದೆ. ನೀವು ಒಂದು ಮಾಡಿದರೆ ನಾವು ಎರಡು ಎನ್ನುವಂತಾಗಿದೆ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲೂ ಕೋಮುಗಲಭೆ ಆಗದಂತೆ ನೋಡಿಕೊಂಡಿದ್ದೇವೆ. ಗ್ಯಾರಂಟಿಗಳನ್ನು ಸರಿಸಮನಾಗಿ ಹಂಚಿದ್ದೇವೆ. ಇದಕ್ಕೆ ಮತದಾರರು ತೀರ್ಪು ಕೊಟ್ಟಿದ್ದಾರೆ’ ಎಂದರು.
ಚುನಾವಣೆಯಲ್ಲಿ ಹಣದ ಹೊಳೆ ಹರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘2008ರ ಮೊದಲು ಜನರ ಭಾವನೆಗೆ ಬೆಲೆ ಇತ್ತು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಣದ ಹೊಳೆ ಹರಿಯುತ್ತಿದೆ. ಯಾರೂ ಮಾಡದಷ್ಟು ವೆಚ್ಚ ಚುನಾವಣೆಗಳಲ್ಲಿ ಆಗುತ್ತಿದೆ. ಇದರಲ್ಲಿ ಯಾವ ಸಂಶಯವೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.