ಬೆಂಗಳೂರು: ‘ಜಾತಿವಾರು ಜನಗಣತಿ ವರದಿಯನ್ನು ಸರ್ಕಾರ ಇನ್ನೂ ಏಕೆ ಬಿಡುಗಡೆ ಮಾಡಿಲ್ಲ. ಕಾಂತರಾಜ ಮತ್ತು ಜಯಪ್ರಕಾಶ್ ಹೆಗ್ಡೆ ಅವರ ವರದಿ ಸ್ವೀಕರಿಸಿ ಎಷ್ಟು ದಿನ ಆಯಿತು? ಅದನ್ನು ಇಟ್ಟುಕೊಂಡು ಏನು ಮಾಡುತ್ತಿದ್ದೀರಾ?’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ವರದಿ ಸ್ವೀಕರಿಸಿರಲಿಲ್ಲವೆಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯಿತು. ಕಾಂತರಾಜ ವರದಿ ಇಟ್ಟುಕೊಂಡು ಗಂಧದ ಕಡ್ಡಿ ಹಚ್ಚಿ ಬೆಳಗುತ್ತಿದ್ದಾರೆಯೇ? ಉಪ ಸಮಿತಿ ರಚಿಸುವುದಾಗಿ ಹೇಳುತ್ತಿದ್ದಾರೆ. ಇಂತಹ ಸಬೂಬು ಹೇಳಿ ಎಷ್ಟು ದಿನ ಕಳೆಯುತ್ತೀರಾ? ಚುನಾವಣೆ ಘೋಷಣೆ ಆಗಿದ್ದು ಈಗ. ಲೋಕಸಭೆ ಚುನಾವಣೆ ಮುಂಚೆ ವರದಿ ಸ್ವೀಕಾರ ಮಾಡಿದ್ದೀರಿ. ಯಾಕೆ ಬಿಡುಗಡೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.
‘ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ನನ್ನ ಹಾಗೂ ನನ್ನ ತಂದೆ ದೇವೆಗೌಡರ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಅವಹೇಳನಕಾರಿ ಟೀಕೆಗಳಿಗೆ ಈಗ ಉತ್ತರ ಕೊಡುವುದಿಲ್ಲ. ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಮೇಲೆ ಉತ್ತರಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ದೇವೇಗೌಡ ಆರೋಗ್ಯದಿಂದ ಹಿಡಿದು ನಮ್ಮ ಪಕ್ಷದ ಹಲವಾರು ನಿರ್ಧಾರ, ನನ್ನ ಹಾಗೂ ಕುಟುಂಬದ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇವರಿಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ. ಅವರೊಬ್ಬರೇ ಒಕ್ಕಲಿಗರಾ? ನಾವೂ ಒಕ್ಕಲಿಗರೇ ಎಂದು ಚರ್ಚೆ ಮಾಡುತ್ತಿದ್ದಾರೆ. ಎಲ್ಲದಕ್ಕೂ ಫಲಿತಾಂಶದ ನಂತರ ಉತ್ತರ ಕೋಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.