ಬೆಂಗಳೂರು: ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೇನೋ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯ ಕುರಿತು ಪದ ಸಂಸ್ಕೃತಿ ಇಲ್ಲದವರಂತೆ ನೀವು ನೀಡಿದ ಹೇಳಿಕೆಗೆ ಪ್ರತಿಯಾಗಿ ನಾನು ಎತ್ತಿದ್ದು ಈವರೆಗಿನ ನಿಮ್ಮ ಆಡಳಿತದ ವೈಫಲ್ಯಗಳ ಪ್ರಶ್ನೆಗಳನ್ನು, ಈ ಪ್ರಶ್ನೆಗಳನ್ನು ಕೇಳಿದ್ದು ನಾನು ಈ ನಾಡಿನ ರೈತರು, ಮಹಿಳೆಯರು, ಬಡವರು, ಶೋಷಿತರು,ಆದಿವಾಸಿಗಳು,ಹಿಂದುಳಿದವರ ಪರವಾಗಿ, ಇದ್ಯಾವುದಕ್ಕೂ ಉತ್ತರಿಸಲಾಗದ ನೀವು ವಿಷಯಾಂತರ ಮಾಡಿ ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿರುವ ನಿಮ್ಮ ಬಗ್ಗೆ ಮರುಕ ಎನಿಸುತ್ತಿದೆ’ ಎಂದು ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.
‘ಶಿಸ್ತಿನ ಚೌಕಟ್ಟು ಬಿಜೆಪಿಯ ತಾಕತ್ತು -ಬಿಜೆಪಿಯ ಒಗ್ಗಟ್ಟು ಭಾರತದ ಗಮ್ಮತ್ತು’ ಇದು ಕರ್ನಾಟಕಕ್ಕೂ ಹೊರತಲ್ಲ ಎಂಬುದನ್ನು ನಿಮಗೆ ತಿಳಿಸಲು ಬಯಸುವೆ. ನಾನೊಬ್ಬ ಪ್ರಧಾನ ಸೇವಕ ಎಂದ ಕರೆದುಕೊಂಡ ನರೇಂದ್ರ ಮೋದಿಯವರು ನನಗೆ ಆದರ್ಶ, ಸದ್ಯ ಪಕ್ಷಾಧ್ಯಕ್ಷ ಸ್ಥಾನ ನನಗೆ ವರಿಷ್ಠರು ವಹಿಸಿಕೊಟ್ಟಿರುವ ಮಹತ್ವದ ಜವಾಬ್ದಾರಿಯೇ ಹೊರತು ಅದು ನಿಮ್ಮಂತೆ ಸರ್ವಾಧಿಕಾರ ಪ್ರದರ್ಶಿಸಲು ದೊರಕಿರುವ ಅಧಿಕಾರ ಸ್ಥಾನವಲ್ಲ. ನಾನೇನಿದ್ದರೂ ಒಬ್ಬ ಸಾಮಾನ್ಯ ಕಾರ್ಯಕರ್ತ ಎಂಬ ಭಾವನೆ ಹೊಂದಿರುವವನೇ ಹೊರತು ವ್ಯಕ್ತಿತ್ವಕ್ಕೆ ಕಳಂಕ ಮೆತ್ತಿಕೊಂಡರೂ ಅಧಿಕಾರಕ್ಕೆ ಅಂಟಿಕೂರುವ ಜಯಮಾನದವನಲ್ಲ’ ಎಂದು ವಿಜಯೇಂದ್ರ ಗುಡುಗಿದ್ದಾರೆ.
‘ಒಬ್ಬ ಮುಖ್ಯಮಂತ್ರಿಯಾಗಿ ಘನತೆಯ ಸ್ಥಾನದಲ್ಲಿ ಕುಳಿತಿರುವ ನೀವು ಅಸಂಬದ್ಧವಾಗಿ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡು ಕಾನೂನಿನ ಕುಣಿಕೆಯ ಆತಂಕ ಎದುರಿಸುತ್ತಿರುವ ಪರಿಸ್ಥಿತಿಯಿಂದ ಹತಾಶೆಯ ಅಂಚಿಗೆ ತಲುಪಿರುವುದು ಗೋಚರಿಸುತ್ತಿದೆ. ನಾನು ಎತ್ತಿರುವ ಪ್ರಶ್ನೆಗಳಿಗೆ ನೀವು ಬಹಿರಂಗ ಚರ್ಚೆಗೆ ಬರಲು ಸಾಧ್ಯವಿಲ್ಲದಿದ್ದರೆ ಮಾಧ್ಯಮಗಳ ಮೂಲಕವೇ ಉತ್ತರಿಸಿ ನಿಮ್ಮ ಸಾಧನೆಗಳನ್ನು ಬಣ್ಣಿಸಿಕೊಳ್ಳಿ ನೋಡೋಣ. ರಾಜ್ಯದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಆರೋಗ್ಯಕರ ಮನಸ್ಥಿತಿಯಿಂದ ನಾನು ನಿಮಗೆ ಪ್ರಶ್ನೆಗಳನ್ನು ಮುಂದಿಟ್ಟರೆ ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸುವ ಬದಲು ‘ಏತಿ ಎಂದರೆ ಪ್ರೇತಿ ಎಂದರು’ ಎಂಬಂತೆ ಪ್ರತಿಕ್ರಿಯಿಸಿದ್ದೀರಿ" ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ
ನನ್ನ ಪೂಜ್ಯ ತಂದೆ ಯಡಿಯೂರಪ್ಪನವರು ಹೋರಾಟದ ಹಿನ್ನೆಲೆಯಿಂದ ಮೇಲೆದ್ದು ಬಂದವರು, ಜನರಿಗಾಗಿ ಮಿಡಿದವರು, ರೈತರಿಗಾಗಿ ಧ್ವನಿ ಎತ್ತಿದವರು, ಶೋಷಣೆಯ ವಿರುದ್ಧ ಪ್ರತಿಭಟಿಸಿದವರು, ಇಂತಹ ಹೋರಾಟಗಳ ಯಾವ ಹಿನ್ನೆಲೆಯೂ ಇಲ್ಲದ ನೀವು ಅದೃಷ್ಟವಂತ ರಾಜಕಾರಣಿ ಎನ್ನುವುದು ಇಡೀ ರಾಜ್ಯಕ್ಕೇ ತಿಳಿದ ವಿಚಾರ. ಯಡಿಯೂರಪ್ಪನವರು ಅಧಿಕಾರದ ಕನಸನ್ನು ಎಂದೂ ಕಂಡವರಲ್ಲ, ಬಡವರಿಗಾಗಿ, ರೈತರಿಗಾಗಿ ತಮ್ಮ ಇಡೀ ರಾಜಕೀಯ ಜೀವನವನ್ನು ಸಮರ್ಪಿಸಿಕೊಂಡವರು. ಕರ್ನಾಟಕದ ಇತಿಹಾಸದಲ್ಲಿ ಅವರ ಮೇಲೆ ನಡೆದ ರಾಜಕೀಯ ಪಿತೂರಿ, ಹುನ್ನಾರಗಳು ಇನ್ಯಾವ ರಾಜಕಾರಣಿಗಳ ಮೇಲೆ ನಡೆದಿಲ್ಲ ಎನ್ನುವುದನ್ನು ಇತಿಹಾಸ ಹೇಳುತ್ತಿದೆ. ಸುಳ್ಳು ದೂರುಗಳು, ಸುಳ್ಳು ಆರೋಪಗಳ ವ್ಯೂಹಗಳನ್ನು ಬೇಧಿಸಿ ಅಧಿಕಾರ ಇರಲಿ, ಇಲ್ಲದಿರಲಿ ಇವತ್ತಿಗೂ ಜನಮನದ ನಾಯಕನಾಗಿರುವ ಯಡಿಯೂರಪ್ಪನವರ ಮೇಲೆ ಇಂದಿಗೂ ಪಿತೂರಿಗಳು ನಡೆಯುತ್ತಲೇ ಇವೆ, ಅದರ ಭಾಗವೇ 'ಪೋಕ್ಸೊ ಹೆಸರಿನ ಸುಳ್ಳು ಕೇಸು’ ಇದಕ್ಕೂ ಇಷ್ಟರಲ್ಲೇ ನ್ಯಾಯಾಲಯದಿಂದ ನ್ಯಾಯದ ಉತ್ತರ ಸಿಗಲಿದೆ ಎಂಬ ನಂಬಿಕೆ ಇದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಸಿದ್ದರಾಮಯ್ಯ ಅವರೇ, ನಿಮಗೆ ಸುತ್ತಿಕೊಂಡಿರುವ ಮುಡಾ ಹಗರಣದ ಉರುಳಿನಿಂದ ಹಿಡಿದು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಳಂಕಗಳನ್ನು ಹೊತ್ತ ನೀವು ರಾಜಕೀಯ ಜೀವನದಲ್ಲಿ ಮುಂದೆಂದೂ ಕಳಂಕ ರಹಿತರಾಗಿ ಹೊರಬರಲು ಸಾಧ್ಯವೇ ಇಲ್ಲ ಎನ್ನುವುದನ್ನು ಸದ್ಯದ ತನಿಖೆಗಳು ಹಾಗೂ ಹೊರ ಬಂದಿರುವ ನ್ಯಾಯಾಲಯದ ತೀರ್ಪುಗಳಲ್ಲಿ ವ್ಯಕ್ತವಾಗುತ್ತಿದೆ. ಕೆಂಪಣ್ಣ ಆಯೋಗವನ್ನು ರಚಿಸಿ ಅರ್ಕಾವತಿ ರೀಡೂ ಪ್ರಕರಣವನ್ನು ಬದಿಗೆ ಸರಿಸಿ ಬಚಾವಾದಂತೆ ಮುಡಾ ಪ್ರಕರಣವನ್ನು ನೀವು ಬದಿಗೆ ಸರಿಸಿ ಪಾರಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕಾಲವೇ ಉತ್ತರ ಹೇಳಲಿದೆ’ ಎಂದು ವಿಜಯೇಂದ್ರ ಕುಟುಕಿದ್ದಾರೆ.
‘ಮತ್ತೆ ನಿಮಗೆ ನೆನಪಿಸುತ್ತಿದ್ದೇನೆ, ನನ್ನ ಈ ಹಿಂದಿನ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ನಾನು ನಿಮ್ಮ ವೈಯಕ್ತಿಕ ಬದುಕಿನ ಚರಿತ್ರೆಯನ್ನು ಪ್ರಶ್ನಿಸಿಲ್ಲ ಬದಲಾಗಿ ಈ ನಾಡು ಹಾಗೂ ಜನರ ಹಿತದೃಷ್ಟಿಯಿಂದ ಒಬ್ಬ ಮುಖ್ಯಮಂತ್ರಿಗೆ ಒಬ್ಬ ಪ್ರಜೆಯಾಗಿ ಕೇಳಬೇಕಾದ ಪ್ರಶ್ನೆಗಳನ್ನಷ್ಟೇ ಕೇಳಿದ್ದೇನೆ. ನೀವು ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಅವರ ಹೆಸರನ್ನು ಉಲ್ಲೇಖಿಸಿದ್ದೀರಿ. ಆದರೆ, ವಿಶ್ವನಾಥ್ ಅವರು ಮೊದಲ ದಿನದಿಂದಲೇ ನೀವು ಪಡೆದ 14 ಅಕ್ರಮ ನಿವೇಶನಗಳ ಕರ್ಮಕಾಂಡವನ್ನು ಬಯಲಿಗೆಳೆದು ಇವತ್ತಿಗೂ ನಿಮ್ಮ ಭ್ರಷ್ಟಾಚಾರದ ಕುರಿತು ಸರಣಿ ರೂಪದಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೀವು ಮರೆತಂತಿದೆ. ನಿಮ್ಮನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದು ಎಂಥಾ ತಪ್ಪು ಮಾಡಿಬಿಟ್ಟೆವು ಎಂದು ಇದೇ ವಿಶ್ವನಾಥ್ ಅವರು ಈಗಲೂ ಪಶ್ಚಾತಾಪ ಪಡುವ ಅವರ ಹೇಳಿಕೆಯನ್ನು ನೀವು ಮರೆತಂತಿದೆ’ ಎಂದಿದ್ದಾರೆ.
‘ರೈತರಿಗೆ ನೀಡಿರುವ ವಕ್ಫ್ ನೋಟಿಸ್ ವಿಚಾರದಲ್ಲೂ ಗೊಂದಲದ ನಿರ್ಧಾರ ಪ್ರಕಟಿಸಿದ್ದೀರಿ. ಆದರೆ, ನಿಮ್ಮ ಅಧಿಕಾರಾವಧಿಯಲ್ಲೇ ಮುಗ್ಧ ರೈತರ ಜಮೀನಿನ ದಾಖಲೆಗೆ ವಕ್ಫ್ ಹೆಸರು ಕಾಣಿಸಿಕೊಂಡಿದ್ದಾದರೂ ಏಕೆ? ನೋಟಿಸ್‌ಗಳನ್ನು ಕೊಟ್ಟಿದ್ದಾದರೂ ಏಕೆ? ನೋಟಿಸ್‌ಗಳನ್ನು ಈಗ ವಾಪಸ್ ಪಡೆಯುತ್ತಿರುವುದಾಗಿ ಹೇಳುತ್ತಿರುವುದು ‘ಮೊಸಳೆ ಕಣ್ಣೀರು’ ಎಂಬುದನ್ನು ನಮ್ಮ ರೈತರು ಅರ್ಥ ಮಾಡಿಕೊಳ್ಳಲಾರದಷ್ಟು ಮುಗ್ಧರಲ್ಲ ಎನ್ನುವುದು ನಿಮಗೆ ತಿಳಿದಿರಲಿ’ ಎಂದು ವಿಜಯೇಂದ್ರ ಹೇಳಿದ್ದಾರೆ.
‘ನೀವು (ಸಿದ್ದರಾಮಯ್ಯ) 15 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ದಾಖಲೆಯ ವೀರ ನಿಜ, ಸರ್ಕಾರಿ ನೌಕರರಿಗೂ ಸಂಬಳ ಕೊಡುವುದಕ್ಕೂ ಸಾಲ ಮಾಡುವ ದುಸ್ಥಿತಿಗೆ ಇಳಿಸಿ ವೈಫಲ್ಯರಾಗಿದ್ದೀರಿ ಏಕೆ? ಕೆಲಸ ಮಾಡಿ ಬಿಲ್ ಪಾವತಿಯಾಗದೇ ಕಣ್ಣೀರು ಸುರಿಸುತ್ತಿರುವ ಗುತ್ತಿಗೆದಾರರು ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ತಿಳಿಸುವ ನಿಜವಾದ ಸಾಕ್ಷಿದಾರರಾಗಿದ್ದಾರೆ ಎನ್ನುವುದನ್ನು ಮಹಾನ್ ಆರ್ಥಿಕ ತಜ್ಞರಾದ ನಿಮಗೆ ನೆನಪಿಸಲು ಬಯಸುತ್ತೇನೆ’ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.