ADVERTISEMENT

ಕಾಂಗ್ರೆಸ್‌ಗೆ ಆರೋಗ್ಯವೇ ಆಘಾತಕಾರಿ: ಆಜಾದ್ ರಾಜೀನಾಮೆ ಬಗ್ಗೆ ಬಿಜೆಪಿ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2022, 7:59 IST
Last Updated 17 ಆಗಸ್ಟ್ 2022, 7:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿರುವುದರಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತೆ ಬೀದಿಗೆ ಬಿದ್ದಿದೆ ಎಂದು ಬಿಜೆಪಿ ಟೀಕಿಸಿದೆ.

ಗುಲಾಂ ನಬಿ ಆಜಾದ್ ರಾಜೀನಾಮೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿರಿಯ ನಾಯಕ ಗುಲಾಂ‌ ನಬಿ ಆಜಾದ್ ಅವರನ್ನು ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಆರೋಗ್ಯವೇ ಆಘಾತಕಾರಿಯಾಗಿದೆ’ ಎಂದು ವ್ಯಂ‌ಗ್ಯವಾಡಿದೆ.

‘ಕಾಂಗ್ರೆಸ್ ಒಳಮನೆಯಲ್ಲಿ ನೂರಾರು ರಂಧ್ರ. ಹೈಕಮಾಂಡ್ ವಿರುದ್ಧ ಜಿ –23 ಮುಖಂಡರು ಸದಾ ದಂಗೆ ಏಳುತ್ತಿದ್ದರೂ ಎದುರಿಸಲಾಗದ ಕಾಂಗ್ರೆಸ್ ಹಡಗು ರಾಷ್ಟ್ರಮಟ್ಟದಲ್ಲೇ ಮುಳುಗಿ ಹೋಗುತ್ತಿದೆ’ ಎಂದು ಬಿಜೆಪಿ ಲೇವಡಿ ಮಾಡಿದೆ.

ADVERTISEMENT

‘ಪ್ರತಿ ತಿಂಗಳು ಒಂದು ಕಾರ್ಯಕ್ರಮದ ಮೂಲಕ ಸದಾ ಚಾಲ್ತಿಯಲ್ಲಿರಲು ಕಾಂಗ್ರೆಸ್ ಲೆಕ್ಕ ಹಾಕಿದೆ. ಆದರೆ ಒಂದೇ ತಿಂಗಳಲ್ಲಿ ಮೂವರು ನಾಯಕರು ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದವರಂತೆ ಉತ್ಸವ, ನಡಿಗೆ ಹಾಗೂ ಪ್ರಚಾರ ಯಾತ್ರೆ ಆರಂಭಿಸಿದ್ದಾರೆ. ಮೊದಲು ಮನೆಯ ಜಗಳ ಬಗೆಹರಿಸಿಕೊಳ್ಳಿ, ನಂತರ ಜಗತ್ತಿನ ಸಮಸ್ಯೆ ಬಗ್ಗೆ ಮಾತನಾಡಿ’ ಎಂದು ಬಿಜೆಪಿ ಗುಡುಗಿದೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸ್ವಾತಂತ್ರ್ಯದ ನಡಿಗೆಯ ಉದ್ದೇಶ ಏನಾಗಿತ್ತು? ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್ ಹಿರಿಯ ನಾಯಕರು ಡಿಕೆಶಿ ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ’ ಎಂದು ಬಿಜೆಪಿ ಪ್ರಶ್ನಿಸಿದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.