ಬೆಂಗಳೂರು: ‘ಅಭಿವೃದ್ಧಿ ಹಾಲು ಕುಡಿದವರು ಇಷ್ಟು ದಿನ ಬದುಕಿದ್ದೇವೆ. ಕೋಮುವಾದದ ವಿಷ ಕುಡಿದವರು ಎಷ್ಟು ದಿನ ಬದುಕುತ್ತಾರೆ ನೋಡೋಣ’ ಎಂದು ವಿಧಾನ ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪೂರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ‘ಒಂದೆಡೆ ಕೋಮುವಾದ, ಇನ್ನೊಂದೆಡೆ ಜಾತಿವಾದ. ರಾಯಚೂರು, ಕಲಾದಗಿ, ಬಸವನ ಬಾಗೇವಾಡಿ ಸೇರಿದಂತೆ ಹಲವು ಕಡೆಗಳಲ್ಲಿ ಪರಿಶಿಷ್ಟ ಸಮುದಾಯದವರ ಕೊಲೆಗಳು ನಡೆದು ಹೋಗಿವೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವನ್ನೂ ಯಾರೂ ಮಾಡಲಿಲ್ಲ’ ಎಂದು ಕಟುವಾಗಿ ಟೀಕಿಸಿದರು.
‘ಅಸ್ಪೃಶ್ಯತೆ ಇನ್ನೂ ಇದೆ. ನಿಮಗೆ ನಾಚಿಕೆಯಾಗಬೇಕು. ಪರಿಶಿಷ್ಟ ಜಾತಿಯವರಿಗೆ ಸಮಾನತೆ ಕೊಡುವುದಾದರೆ ನಮಗೆ ಸ್ವಾತಂತ್ರ್ಯವೇ ಬೇಡ ಎಂದು ಆರ್‌ಎಸ್‌ಎಸ್ ನಾಯಕ ಗೋಲ್ವಾಲ್ಕರ್ ಹೇಳಿದ್ದರು. ಈಗಲೂ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯವರನ್ನು ಅಸಮಾನತೆಯಿಂದ ಕಾಣುತ್ತಿದೆ. ಪರಿಶಿಷ್ಟರ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಲಾಗಿದೆ’ ಎಂದು ಪಟ್ಟಿಯನ್ನು ಓದಿದರು.
ತಮ್ಮ ಭಾಷಣದುದ್ದಕ್ಕೂ ಆಡಳಿತ ಪಕ್ಷದವರನ್ನು ಕೆಣಕಿ ಮಾತನಾಡಿದ್ದರಿಂದ, ಉಭಯ ಪಕ್ಷಗಳ ಸದಸ್ಯರ ನಡುವೆ ಪದೇ ಪದೇ ಮಾತಿನ ಚಕಮಕಿ ನಡೆಯಿತು. ಸಭಾಪತಿ ಪೀಠದಲ್ಲಿದ್ದ ಶ್ರೀಕಂಠೇಗೌಡ, ಗದ್ದಲವನ್ನು ನಿಭಾಯಿಸಲು ಸತತ ಪ್ರಯತ್ನ ಮಾಡಿದರು.
ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಪ್ರತಿಕ್ರಿಯಿಸಿ, ‘ಅಸ್ಪೃಶ್ಯತೆಯನ್ನು ಅಪರಾಧ ಎಂದು ಪರಿಗಣಿಸದಿದ್ದರೆ ಜಗತ್ತಿನಲ್ಲಿ ಯಾವ ಅಪರಾಧಗಳು ಅಪರಾಧಗಳೇ ಅಲ್ಲ ಎಂದು ಸಂಘ ಪರಿವಾರದವರು ಬಲವಾಗಿ ಪ್ರತಿಪಾದಿಸಿದ್ದರು. ಈಗ ಅದನ್ನು ತಿರುಚಿ ಮಾತನಾಡಲಾಗುತ್ತಿದೆ. ಇಷ್ಟು ದಿನ ಆಡಳಿತ ನಡೆಸಿದವರೇ ನೀವು. ಈಗ ನಮ್ಮ ಬಗ್ಗೆ ಆರೋಪ ಮಾಡುತ್ತೀರಾ’ ಎಂದು ಪ್ರಶ್ನಿಸಿದರು.
*
ನಮ್ಮ ಹಗರಣಗಳನ್ನು ತೆಗೆಯಿರಿ. ಅದು ನಿಮ್ಮ ತಾಕತ್ತು. ನೀವು ಸುಳ್ಳು ಹೇಳುತ್ತೀರಿ ಎಂದು ನಿಮಗೆ ಒಮ್ಮೆಯೂ ಬಹುಮತ ಸಿಕ್ಕಿಲ್ಲ. ನಿಮ್ಮ ಅವಧಿಯಲ್ಲಿ ಶೇ 40 ಕಮಿಷನ್ ಪಡೆಯಲಾಗುತ್ತಿದೆ.
-ಆರ್.ಬಿ. ತಿಮ್ಮಾಪೂರ,ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.