ಬೆಂಗಳೂರು: ‘ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರು ಸಾಧ್ಯ ಇಲ್ಲ ಎಂದಿರುವುದನ್ನು ಈಡೇರಿಸುವುದೇ ಕಾಂಗ್ರೆಸ್ ಗುರಿ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳಿಂದ ಯಾವತ್ತೂ ಹಿಂದೆ ಸರಿದಿಲ್ಲ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಮ್ಮ ಐದೂ ಗ್ಯಾರಂಟಿಗಳು ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸುತ್ತಿವೆ. ಇದು ಪ್ರಧಾನಿಯವರಿಗೂ ಗೊತ್ತಿದೆ. ಕರ್ನಾಟಕದ ಈ ಮಾದರಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಕಡ್ಡಾಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರ ಈ ಯೋಜನೆಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳುವ ಪರಿಸ್ಥಿತಿ ಉದ್ಭವವಾಗಲಿದೆ ಎಂಬುದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಲಿದ್ದಾರೆ’ ಎಂದರು.
ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನ: ‘ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಹತ್ತಿರದಲ್ಲಿದ್ದು, ಜನರ ಗಮನ ಬೇರೆ ವಿಷಯದ ಕಡೆ ಸೆಳೆಯಲು ಪ್ರಧಾನಿ ಪ್ರಯತ್ನಿಸುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದರು.
‘ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಆಗಾಗ ಸಲಹೆ ನೀಡುತ್ತಿರುತ್ತಾರೆ. ಈ ಐದು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ. ಈ ಯೋಜನೆಗಳ ಲೋಪದೋಷಗಳನ್ನು ಸರಿಪಡಿಸಲು ಕೆಲವರು ಸಲಹೆ ಕೊಟ್ಟಿರಬಹುದು. ಅದನ್ನು ಪರಿಗಣಿಸಬೇಕೇ, ಬೇಡವೇ ಎಂಬುದನ್ನು ಸರ್ಕಾರ ತೀರ್ಮಾನ ಮಾಡುತ್ತದೆ’ ಎಂದರು.
‘ವಿರೋಧ ಪಕ್ಷಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅವರು ಸಾಧ್ಯವಾದರೆ ಬೆಂಬಲ ನೀಡಲಿ. ಇಲ್ಲದಿದ್ದರೆ ನೇರವಾಗಿ ವಿರೋಧ ಮಾಡಲಿ. ಕೊಂಕು ಮಾತುಗಳನ್ನು ಆಡುವುದನ್ನು ನಿಲ್ಲಿಸಲಿ’ ಎಂದೂ ತಿರುಗೇಟು ನೀಡಿದರು.
ಅರ್ಹರು– ಅನರ್ಹರನ್ನು ಗುರುತಿಸುವುದು ಯೋಜನೆ ಪರಿಷ್ಕರಣೆಯಲ್ಲ: ‘ಈ ಗ್ಯಾರಂಟಿ ಯೋಜನೆಯಲ್ಲಿ ಆದಾಯ ತೆರಿಗೆ, ಜಿಎಸ್‌ಟಿ ಪಾವತಿದಾರರು, ಸರ್ಕಾರಿ ನೌಕರರು ಫಲಾನುಭವಿಗಳಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ವಿಚಾರವಾಗಿ ಶಾಸಕರುಗಳಿಗೆ ದೂರು ಬರುತ್ತವೆ. ಅವಶ್ಯಕತೆ ಇರುವವರಿಗೆ ಮಾತ್ರ ಈ ಯೋಜನೆ ಸಿಗಲಿ ಎಂದು ಹೇಳುತ್ತಾರೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಐದು ಕೆ.ಜಿ ಅಕ್ಕಿ ಕೊಡಿ, ಹಣ ಬೇಡ ಎನ್ನುತ್ತಾರೆ. ಹೀಗಾಗಿ, ಈ ಯೋಜನೆಯ ಅನುಕೂಲ ಪಡೆಯುತ್ತಿರುವವರನ್ನು ಗುರುತಿಸಬೇಕು. ಯೋಜನೆ ಲಾಭ ಸಿಗದ ಅರ್ಹರನ್ನು ಇನ್ನು ಪರಿಣಾಮಕಾರಿಯಾಗಿ ಗುರುತಿಸಬೇಕು. ಇದು ಯೋಜನೆಯ ಪರಿಷ್ಕರಣೆಯಲ್ಲ. ಉದಾಹರಣೆಗೆ ರಾಮನಗರ ಜಿಲ್ಲೆಯಲ್ಲಿ ಶೇ 92ರಷ್ಟು ಜನರಿಗೆ ಈ ಯೋಜನೆ ಲಾಭ ಸಿಗುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತಾರು ಸಾವಿರ ಮನೆಗಳಿಗೆ ಯೋಜನೆ ಸಿಕ್ಕಿರಲಿಲ್ಲ. ನಾವು ನಮ್ಮ ಕಾರ್ಯಕರ್ತರು, ಮುಖಂಡರನ್ನು ಬಿಟ್ಟು, ವಂಚಿತರಿಗೆ ಯೋಜನೆ ಸಿಗುವಂತೆ ಮಾಡಿದ್ದೆವು’ ಎಂದು ತಿಳಿಸಿದರು.
ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು: ‘ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಮೋಸ ಒಂದು ಭಾಗವಾದರೆ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವಾಗ ದಕ್ಷಿಣ ಭಾರತದ ರಾಜ್ಯಗಳಿಗೆ ಮತ್ತಷ್ಟು ಅನ್ಯಾಯವಾಗಲಿದೆ’ ಎಂದರು.
‘ನಮ್ಮ ಹಕ್ಕು ಪ್ರತಿಪಾದನೆ ಕಷ್ಟವಾಗುತ್ತದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಉತ್ತರ ಪ್ರದೇಶದಲ್ಲಿ ಕ್ಷೇತ್ರಗಳ ಸಂಖ್ಯೆ ದುಪ್ಪಟ್ಟು ಆಗಲಿದ್ದು, ದಕ್ಷಿಣ ಭಾರತದ ಕ್ಷೇತ್ರಗಳ ಸಂಖ್ಯೆ ಕುಸಿಯಲಿದೆ. ಹೀಗಾಗಿ ಬಹಳ ಜವಾಬ್ದಾರಿಯಿಂದ ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಧ್ವನಿ ಎತ್ತಬೇಕು’ ಎಂದರು.
ಯಾವ ರೀತಿ ಹೋರಾಡಬೇಕು ಎಂದು ಕೇಳಿದಾಗ, ‘ಇದು ಕೇವಲ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯಷ್ಟೇ ಅಲ್ಲ. ಬಿಜೆಪಿ, ಎನ್‌ಡಿಎ ಮೈತ್ರಿಕೂಟ, ಬೇರೆ ಪಕ್ಷಗಳು ಹಾಗೂ ಪ್ರತಿಯೊಬ್ಬ ಜನ ಸಾಮಾನ್ಯನ ಜವಾಬ್ದಾರಿಯೂ ಇದೆ’ ಎಂದು ತಿಳಿಸಿದರು.
ಪ್ರಧಾನಿಗಳು ಸತ್ಯಾಸತ್ಯತೆ ಅರಿಯಬೇಕು: ‘ಪ್ರಧಾನಿಯಾದವರು ಪುಡಾರಿಯಂತೆ ನಡೆದುಕೊಳ್ಳಬಾರದು’ ಎಂಬ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಕೇಳಿದಾಗ, ‘ಪ್ರಧಾನಮಂತ್ರಿಗೆ ಅವರದೇ ಆದ ಘನತೆ, ಗೌರವವಿದೆ. ಅವರು ಸತ್ಯಾಸತ್ಯತೆ ಪರಿಶೀಲಿಸದೆ ರಾಜಕೀಯ ಉದ್ದೇಶದಿಂದ ಆತುರದ ಹೇಳಿಕೆಗಳನ್ನು ನೀಡಬಾರದು’ ಎಂದು ತಿಳಿಸಿದರು.
ತೆರಿಗೆ ಪಾಲು ಸರಿಯಾಗಿ ಸಿಕ್ಕರೆ ಕರ್ನಾಟಕ ನಂ.1 ಆಗಲಿದೆ: ‘ಕರ್ನಾಟಕ ಪ್ರಗತಿಪರ ರಾಜ್ಯ. ನಮ್ಮ ರಾಜ್ಯದಲ್ಲಿ ಸಾಕಷ್ಟು ಆದಾಯವಿದೆ. ನಾವು ಗ್ಯಾರಂಟಿ ಹಾಗೂ ಅಭಿವೃದ್ಧಿ ನಿಲ್ಲಿಸುವುದಿಲ್ಲ. ನಮಗೆ ಸಿಗಬೇಕಾದ ತೆರಿಗೆ ಪಾಲು ನಮಗೆ ಸಿಕ್ಕರೆ, ದೇಶದಲ್ಲೇ ನಮ್ಮ ರಾಜ್ಯ ನಂಬರ್ ಒನ್ ಸ್ಥಾನಕ್ಕೆ ಏರಲಿದೆ’ ಎಂದರು.
ಸ್ವಾರ್ಥಕ್ಕಾಗಿ ಕಣ್ಣೀರು: ‘ಕಾಂಗ್ರೆಸ್‌ನವರಿಗೆ ಮನುಷ್ಯತ್ವವಿಲ್ಲ’ ಎಂಬ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ‘ಕಣ್ಣೀರಿನಲ್ಲಿ ಅನೇಕ ವಿಧಗಳಿವೆ. ಪದೇ ಪದೇ ಬರುವ ಕಣ್ಣೀರು, ನಾಟಕೀಯ ಕಣ್ಣೀರು, ಉದ್ವೇಗದ ಕಣ್ಣೀರು. ಕುಮಾರಸ್ವಾಮಿ ಹಾಕುವ ಕಣ್ಣೀರು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಇರುತ್ತದೆ. ಅವರಿಗೆ ಎಲ್ಲಾ ಸಂದರ್ಭದಲ್ಲೂ ಕಣ್ಣೀರು ಬರುವುದಿಲ್ಲ. ಜನನಾಯಕರು ಜನರ ಕಣ್ಣೀರು ಒರೆಸಬೇಕು. ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದು, ಕೇವಲ ಸ್ವಾರ್ಥಕ್ಕೆ ಎಂದು ಎಲ್ಲರಿಗೂ ಗೊತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.