ADVERTISEMENT

ಕಮಿಷನ್ ಹಣದಲ್ಲಿ ಬಿಜೆಪಿ ‘ಜನಸ್ಪಂದನ’ ಸಮಾವೇಶ ನಡೆಸುತ್ತಿದೆ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2022, 11:45 IST
Last Updated 10 ಸೆಪ್ಟೆಂಬರ್ 2022, 11:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ‘ಜನಸ್ಪಂದನ’ ಸಮಾವೇಶದಲ್ಲಿ ಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಬಿಜೆಪಿ ನಡೆಸುತ್ತಿರುವ ‘ಜನಸ್ಪಂದನ’ ಸಮಾವೇಶ ವಿಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಬಿಜೆಪಿ ಸರ್ಕಾರ ಸಂಭ್ರಮಾಚರಣೆಯಲ್ಲಿದೆ. ಇದು ಲಜ್ಜೆಗೇಡಿತನದ ಪರಮಾವಧಿ. ರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನೆ’ ಎಂದು ವಾಗ್ದಾಳಿ ನಡೆಸಿದೆ.

‘ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ. ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ. ಬಿಜೆಪಿ ಸರ್ಕಾರಕ್ಕೆ ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ 'ಸ್ಪಂದನೆ' ಇಲ್ಲದಾಗಿದೆ’ ಎಂದು ಕಾಂಗ್ರೆಸ್‌ ಗುಡುಗಿದೆ.

ADVERTISEMENT

‘ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ. ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ? ಬಿಜೆಪಿಗೆ ಕನಿಷ್ಠ ಅಂತಃಕರಣವಿಲ್ಲ. ‘ಜನಸ್ಪಂದನ’ ಸಮಾವೇಶದ ಮುಂದೆ ಮಾನವೀಯತೆ ಕಳೆದುಹೋಗಿದೆ’ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಶೇ 40 ಕಮಿಷನ್ ಹಣದಲ್ಲಿ ‘ಜನಸ್ಪಂದನ’ ಸಮಾವೇಶಕ್ಕೆ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ. ಸಮಾವೇಶದ ವೇದಿಕೆ ಅಲಂಕಾರದ ಖರ್ಚಿನಲ್ಲಿ ಮೃತ ಅಂಕಿತಾಳಿಗೆ ಪರಿಹಾರ ನೀಡಬಹುದಿತ್ತು. ಹಾಡು, ನೃತ್ಯಗಳ ಖರ್ಚಿನಲ್ಲಿ ಬೆಂಗಳೂರಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು. ರಸ್ತೆ ಗುಂಡಿಗೆ ಬಲಿಯಾದವರಿಗೆ ಪರಿಹಾರ ನೀಡಬಹುದಿತ್ತು ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.