ADVERTISEMENT

ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರ ನಿಸರ್ಗದಿಂದಲೇ ಬಯಲಾಗಿದೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮೇ 2022, 9:26 IST
Last Updated 10 ಮೇ 2022, 9:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ದೂಷಣೆಯಿಂದ ತಮ್ಮ ಹಗರಣ ಮುಚ್ಚಿಕೊಳ್ಳಬಹುದು ಎಂದುಕೊಂಡಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಶೇ 40 ಪರ್ಸೆಂಟ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ. ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿದೆ, ತೇಲು ಸೇತುವೆ ತೇಲಿಹೋಗಿದೆ. ಇದು ಶೇ 40 ಪರ್ಸೆಂಟ್ ಪ್ರಭಾವವಲ್ಲದೆ ಇನ್ನೇನು’ ಎಂದು ಪ್ರಶ್ನಿಸಿದೆ.

‘ಮೊನ್ನೆಯಷ್ಟೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು ‘ಟಿಕೆಟ್‌ಗಾಗಿ ಸೀರೆ, ಪಂಚೆ ಹಿಡಿದು ಬರಬೇಡಿ’ ಎಂದು ತಮ್ಮ ಪಕ್ಷದವರಿಗೆ ಹೇಳಿದ್ದರು. ಹಿಡಿದು ಬರಬೇಕಿರುವುದು ‘ಸೂಟ್ ಕೇಸ್’ ಎಂಬುದನ್ನು ಯತ್ನಾಳ್ ಅವರು ತಿಳಿಸಿದ್ದಾರೆ. ಟಿಕೆಟ್‌ಗಾದರೂ ಸರಿ, ಮಂತ್ರಿಗಿರಿ, ಸಿಎಂ ಹುದ್ದೆಗದರೂ ಸರಿ ಬಿಜೆಪಿಯಲ್ಲಿ ‘ಸೂಟ್ ಕೇಸ್’ ಮುಖ್ಯ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ADVERTISEMENT

ಮಾರ್ಚ್ 1ರಂದು ಸಿಎಂ ಬೊಮ್ಮಾಯಿಯವರಿಂದ ಸ್ಟೇಡಿಯಂ ಉದ್ಘಾಟನೆ, ಮೇ 9ರಂದು ಕ್ರೀಡಾಂಗಣ ಕುಸಿದಿದೆ. ಇದು ಶೇ 40 ಪರ್ಸೆಂಟ್ ಕಮೀಷನ್‌ನಿಂದ ಆಗಿರಬಹುದೇ?, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವ್ಯಾಪಕವಾದ ಭ್ರಷ್ಟಾಚಾರವು ಬ್ರಾಂಡ್ ಕರ್ನಾಟಕವನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಮೇ 6ರಂದು ಮೊದಲ ತೇಲುವ ಸೇತುವೆ ಅನಾವರಣ, ಮೇ 9ರಂದು ತೇಲುವ ಸೇತುವೆ ತೇಲುತ್ತಿದೆ!, ಬೊಮ್ಮಾಯಿ ಸರ್ಕಾರದ 40 ಪರ್ಸೆಂಟ್ ಕಮಿಷನ್‌ ಭ್ರಷ್ಟಾಚಾರದ ಅಸಹನೀಯ ದುರ್ವಾಸನೆಯು ‘ಬ್ರಾಂಡ್ ಕರ್ನಾಟಕ’ವನ್ನು ಮಿಲಿಸೆಕೆಂಡ್‌ನಲ್ಲಿ ಕಳಂಕಿತಗೊಳಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.